ಮುಸ್ಲಿಮರ ವಿರುದ್ಧ ತಪ್ಪು ಭಯೋತ್ಪಾದಕ ಆರೋಪ ಕಳವಳಕಾರಿ ವಿಷಯ: ಸದಾನಂದ ಗೌಡ

ಮುಸ್ಲಿಂ ಯುವಕರ ವಿರುದ್ಧ ಸುಳ್ಳು ಭಯೋತ್ಪಾದನೆಯ ಕೇಸುಗಳನ್ನು ಹಾಕುವುದಕ್ಕೆ ಕೇಂದ್ರ ಕಾನೂನು ಸಚಿವ...
ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ
ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ

ಆಲಿಗಢ: ಮುಸ್ಲಿಂ ಯುವಕರ ವಿರುದ್ಧ ಸುಳ್ಳು ಭಯೋತ್ಪಾದನೆಯ ಕೇಸುಗಳನ್ನು ಹಾಕುವುದಕ್ಕೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನೆಯ ಸುಳ್ಳು ಆರೋಪದ ಮೇಲೆ ಮುಸ್ಲಿಂ ಯುವಕರನ್ನು ಬಂಧಿಸುವುದು ಆತಂಕಪಡುವ ವಿಷಯ. ಅನಂತರ ವಿಚಾರಣೆಯ ವೇಳೆ ಅಂತಹ ಕೇಸುಗಳು ಸರಿಯಾದ ಸಾಕ್ಷ್ಯಾಧಾರ ಇಲ್ಲವೆಂಬ ಕಾರಣಕ್ಕೆ ಬಿದ್ದುಹೋಗುವುದು ಮತ್ತು ಕೆಲ ಕಾಲದ ಜೈಲುವಾಸದ ಬಳಿಕ ಮುಸ್ಲಿಂ ಯುವಕರು ನಿರಪರಾಧಿಗಳೆಂದು ಬಿಡುಗಡೆಗೊಳ್ಳುವ ವಿದ್ಯಮಾನ ದೇಶಾದ್ಯಂತ ಸಾಮಾನ್ಯವಾಗಿ ಕಂಡು ಬರುತ್ತಿದ್ದು ಈ ಪಿಡುಗನ್ನು ಸೂಕ್ತವಾಗಿ ಬಗೆ ಹರಿಸುವ ನಿಟ್ಟಿನಲ್ಲಿ  ಕಾನೂನು ಸುಧಾರಣೆಗಳನ್ನು ತರಲಾಗುತ್ತಿದೆ ಎಂದು ಅವರು ಆಲಿಘಡದಲ್ಲಿ ಇಂದು ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿರುವ ಎನ್‌ಡಿಎ ಸರಕಾರದ ಎರಡು ವರ್ಷಗಳ ಸಾಧನೆಯ ಸಂಭ್ರಮಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು  ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಬದಲಾವಣೆ ತರಲು ಉದ್ದೇಶಿಸಿದ್ದು, ಕ್ರಿಮಿನಲ್‌ ಪ್ರಕ್ರಿಯೆ, ಜಾಮೀನು, ಪ್ರಾಸಿಕ್ಯೂಶನ್‌ ಲೋಪದೋಷಗಳು ಮುಂತಾದ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸುಧಾರಣೆಗಳನ್ನು ತರುವ ದಿಶೆಯಲ್ಲಿ ಕಾನೂನು ಆಯೋಗವು ಕೆಲಸ ಮಾಡುತ್ತಿದೆ. ಈ ಬಗ್ಗೆ ವರದಿಯೊಂದನ್ನು ಸಿದ್ದಪಡಿಸುವ ಮಂಡಳಿಗೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರೊಬ್ಬರನ್ನು ನೇಮಿಸಲಾಗಿದೆ ಮಾತ್ರವಲ್ಲದೆ ವರದಿ ಸಿದ್ಧಪಡಿಸುವಲ್ಲಿ ಕಾನೂನು ತಜ್ಞರು ಕೂಡ ನೆರವಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಗೃಹ ಸಚಿವ ರಾಜನಾಥ್ ಸಿಂಗ್, ಭಾರತ ದೇಶಕ್ಕೆ ಇಸ್ಲಾಮಿಕ್ ಸ್ಟೇಟ್ ಗಳಿಂದ ಯಾವುದೇ ಬೆದರಿಕೆಯಿಲ್ಲ, ಮುಸ್ಲಿಂ ಸಮುದಾಯದವರು ಭಯೋತ್ಪಾದನೆ ಕೃತ್ಯಗಳಿಗೆ ವಿರುದ್ಧವಾಗಿದ್ದಾರೆ. ಅವರು ಭಾರತದಲ್ಲಿ ಮುಸ್ಲಿಂರು ಎಂಬ ಭಾವನೆಯಲ್ಲಿ ಬೆಳೆಯಬಾರದು ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ಹೇಳಿದ ಬೆನ್ನಲ್ಲೆ ಕಾನೂನು ಸಚಿವರು ಈ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com