ರಾಜ್ಯಶಾಸ್ತ್ರದಲ್ಲಿ ಹೇಳಿಕೊಡುವುದು ಅಡುಗೆ ಬಗ್ಗೆ; ಟಾಪರ್ ವಿದ್ಯಾರ್ಥಿನಿ ಉತ್ತರ
ಪಾಟ್ನಾ: ರಾಜ್ಯಶಾಸ್ತ್ರವೆಂದರೆ ಅಡುಗೆಯ ಬಗ್ಗೆ ತಿಳಿಸುವುದು. ಇದು ಬಿಹಾರದಲ್ಲಿ 12ನೇ ತರಗತಿಯ ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ರುಬಿ ರಾಯ್ ಎಂಬಾಕೆ ನೀಡಿದ ಉತ್ತರ. ಇನ್ನು ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ಅಂಕ ಗಳಿಸಿದ ಮತ್ತೊಬ್ಬ ವಿದ್ಯಾರ್ಥಿನಿಯಲ್ಲಿ ನೀರು ಮತ್ತು H2Oದ ನಡುವಿನ ಸಂಬಂಧವೇನು ಎಂದು ಕೇಳಿದರೆ ಉತ್ತರ ಗೊತ್ತಿಲ್ಲ. ಇವೆರಡೂ ಪ್ರಾಥಮಿಕ ಶಾಲೆಯ ಪ್ರಶ್ನೆಗಳು.
ಪರೀಕ್ಷೆಯಲ್ಲಿ ಬಿಹಾರ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿನಿಯರನ್ನು ಸ್ಥಳೀಯ ಸುದ್ದಿವಾಹಿನಿಯೊಂದು ಕಳೆದ ವಾರ ಸಂದರ್ಶನ ನಡೆಸಿತ್ತು. ಆಗ ಇವರಿಂದ ಬಂದ ಉತ್ತರ ಎಂತವರನ್ನೂ ಆ ರಾಜ್ಯದ ಶಿಕ್ಷಣ ವ್ಯವಸ್ಥೆ, ಪರೀಕ್ಷಾ ವಿಧಾನದ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡದೆ ಇರದು. ಇವರ ಉತ್ತರ ಕೇಳಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು, ರಾಜ್ಯದ ಸುಮಾರು 15 ಲಕ್ಷ ವಿದ್ಯಾರ್ಥಿಗಳಲ್ಲಿ 10 ಮಂದಿ ಟಾಪರ್ ಗಳಿಗೆ ಹೊಸ ಪರೀಕ್ಷೆ ನಡೆಸಲು ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಅಶೋಕ್ ಚೌಧರಿ, ಒಂದೋ ಆ ವಿದ್ಯಾರ್ಥಿಗಳ ಬದಲಿಗೆ ಬೇರೆಯವರು ಪರೀಕ್ಷೆ ಬರೆದಿದ್ದಾರೆ, ಇಲ್ಲವೇ ಉತ್ತರ ಪತ್ರಿಕೆಗಳನ್ನು ಬದಲಾಯಿಸಲಾಗಿದೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ವೇಳೆ ಮೋಸ, ನಕಲು ನಡೆದಿರುವ ಸಾಧ್ಯತೆಯಿದೆ. ಪರೀಕ್ಷೆಯಲ್ಲಿ ಟಾಪರ್ ಬಂದವರು ಪಾಟ್ನಾದಿಂದ 20 ಕಿಲೋ ಮೀಟರ್ ದೂರದಲ್ಲಿರುವ ಹಜೀಪುರ ವಿ.ಎನ್.ರಾಯ್ ಕಾಲೇಜಿನವರಾಗಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ಮಾಫಿಯಾ ನಡೆಯುತ್ತಿರಬಹುದು ಎಂಬುದನ್ನು ಶಿಕ್ಷಣ ಸಚಿವರು ಒಪ್ಪಿಕೊಂಡಿದ್ದಾರೆ.
ಕಳೆದ ವರ್ಷ ಈ ಸಮಯದಲ್ಲಿ ಪರೀಕ್ಷಾ ಸಭಾಂಗಣದೊಳಗೆ ಪರೀಕ್ಷೆ ಬರೆಯುತ್ತಿದ್ದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೊರಗೆ ಗೋಡೆಯ ಮೇಲಿನಿಂದ ಹತ್ತಿ ಕಿಟಕಿ ಮೂಲಕ ದೊಡ್ಡವರು ಉತ್ತರವುಳ್ಳ ಚೀಟಿ ನೀಡುತ್ತಿದ್ದ ಫೋಟೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆ ನಂತರ, ರಾಜ್ಯದಲ್ಲಿ ಪರೀಕ್ಷೆ ವೇಳೆ ನಕಲು ಮಾಡಿ ಸಾಬೀತಾದಲ್ಲಿ ಆರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ನಿಯಮ ಜಾರಿಗೆ ತರಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ