ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಿಮ್ ಡಿ-ಆಕ್ಟಿವೇಟ್ ಮಾಡಿದ್ದಕ್ಕೆ ದೂರಸಂಪರ್ಕ ಕಂಪೆನಿಗೆ ಒಂದೂವರೆ ಲಕ್ಷ ರು. ದಂಡ

ಗ್ರಾಹಕರೊಬ್ಬರ ಮೊಬೈಲ್ ಸಂಖ್ಯೆಯನ್ನು ಸರಿಯಾದ ಕಾರಣವಿಲ್ಲದೆ ಡಿ-ಆಕ್ಟಿವೇಟ್ ಮಾಡಿದ್ದಕ್ಕೆ ಮತ್ತು ಹಲವು ಬಾರಿ ಮನವಿ ಮಾಡಿದ...

ಹೈದರಾಬಾದ್: ಗ್ರಾಹಕರೊಬ್ಬರ ಮೊಬೈಲ್ ಸಂಖ್ಯೆಯನ್ನು ಸರಿಯಾದ ಕಾರಣವಿಲ್ಲದೆ ಡಿ-ಆಕ್ಟಿವೇಟ್ ಮಾಡಿದ್ದಕ್ಕೆ ಮತ್ತು ಹಲವು ಬಾರಿ ಮನವಿ ಮಾಡಿದ ನಂತರವೂ ಸಂಖ್ಯೆಯನ್ನು  ಮರಳಿ ಕೊಡದದ್ದಕ್ಕಾಗಿ ಪರಿಹಾರವಾಗಿ 75 ಸಾವಿರ ರೂಪಾಯಿಗಳನ್ನು ನೀಡುವಂತೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ  ಹೈದರಾಬಾದ್ III ನೇ ಜಿಲ್ಲಾ ಬಳಕೆದಾರ ವಿವಾದಗಳ ಇತ್ಯರ್ಥ ವೇದಿಕೆ ಆದೇಶ ನೀಡಿದೆ.

ಎವಿ ನಾರಾಯಣ್ ಎಂಬುವವರು ಐಡಿಯ ಸೆಲ್ಯುಲರ್ ಲಿಮಿಟೆಡ್ ನ ಗ್ರಾಹಕರಾಗಿದ್ದರು. ಅವರು 2014 ಫೆಬ್ರವರಿಯಲ್ಲಿ ತಮ್ಮ  ಮೊಬೈಲ್ ಸಂಖ್ಯೆಯನ್ನು ಏರ್ ಟೆಲ್ ಗೆ ಬದಲಾಯಿಸಿಕೊಂಡಿದ್ದರು. ಅದರ ನಂತರ ಮೊಬೈಲ್ ಸಂಖ್ಯೆ ಅವರ ಮಗನ ಹೆಸರಿನಲ್ಲಿತ್ತು. ಅದನ್ನು ಅವರೇ ಬಳಸುತ್ತಿದ್ದರು. ಸಂಖ್ಯೆಯನ್ನು ಬೇರೆ ಕಂಪೆನಿಗೆ ಬದಲಾಯಿಸಿಕೊಂಡ ನಂತರ ಸ್ವಲ್ಪ ದಿನಗಳಲ್ಲಿ ಅವರು ಅಮೆರಿಕಕ್ಕೆ ಹೋಗಿದ್ದರು. ಹಿಂತಿರುಗಿ ಬಂದ ನಂತರ ಅವರ ಮೊಬೈಲ್ ನಂಬರ್ ಡಿ-ಆಕ್ಟಿವೇಟ್ ಆಗಿತ್ತು.

ವಿಚಾರಿಸಿದಾಗ, 2 ಸಾವಿರದ 729 ರೂಪಾಯಿಗಳನ್ನು ಈ ಹಿಂದಿನ ಕಂಪೆನಿಗೆ ಕಟ್ಟಲು ಬಾಕಿಯಿದ್ದು, ಹಣವನ್ನು ಕಟ್ಟಿ ನಂತರ ಶುಲ್ಕದ ರಶೀದಿಯನ್ನು ಏರ್ ಟೆಲ್ ಆಫೀಸಿಗೆ ಕಳುಹಿಸಿಕೊಡಿ ಎಂದರಂತೆ.

ಬಳಿಕ ನಾರಾಯಣ್ ಅವರ ಮಗ ಅನಿಲ್ ಕುಮಾರ್ ಐಡಿಯ ಸೆಲ್ಯುಲರ್ ಕಂಪೆನಿಗೆ ಕೂಡ ಹೋಗಿ ಕೇಳಿದಾಗ ತಮ್ಮ ಹೆಸರಿನಲ್ಲಿ ಹಣ ಪಾವತಿ ಮಾಡಲು ಬಾಕಿ ಉಳಿದಿಲ್ಲ, ಅವರೇ 500 ರೂಪಾಯಿ ನೀಡಬೇಕಾಗಿದೆ ಎಂದರಂತೆ. ಈ ವಿಷಯವನ್ನು ಏರ್ ಟೆಲ್ ಪ್ರತಿನಿಧಿಗಳಿಗೆ ತಿಳಿಸಿ ಮೊಬೈಲ್ ಸಂಖ್ಯೆಯನ್ನು ಆಕ್ಟಿವೇಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ, ಆದರೆ ಹಲವು ಬಾರಿ ಮನವಿ ಮಾಡಿಕೊಂಡರೂ ಏನೂ ಪ್ರಯೋಜನವಾಗಲಿಲ್ಲ.

ನಾರಾಯಣ್ ಸುಮ್ಮನಾಗಲಿಲ್ಲ. ನಂಬರ್ ನ್ನು ಆಕ್ಟಿವೇಟ್ ಮಾಡುವಂತೆ ಕಳೆದ ವರ್ಷ ಆಗಸ್ಟ್ 14ರಂದು ಮತ್ತು ಸೆಪ್ಟೆಂಬರ್ 19ರಂದು ವಕೀಲರಿಂದ ನೊಟೀಸ್ ಕಳುಹಿಸಿದರು. ಅದಕ್ಕೆ ಏರ್ ಟೆಲ್ ಕಂಪೆನಿಯವರು ಪ್ರತಿಕ್ರಿಯೆ ನೀಡಲಿಲ್ಲ. ಕಂಪೆನಿ ಸಂವಿಧಾನದ ನಿಯಮ ಪ್ರಕಾರ ಸೇವೆಯಲ್ಲಿ ಕಾನೂನು ಉಲ್ಲಂಘನೆ ಮಾಡಿದೆ ಎಂದು ದೂರಿ ಅನಿಲ್ ನ್ಯಾಯ ಮತ್ತು ಪರಿಹಾರ ವೇದಿಕೆಯ ಕದತಟ್ಟಿದರು.

ವಿಚಾರಣೆ ನಡೆಸಿದ ವೇದಿಕೆ ಏರ್ ಟೆಲ್ ಕಂಪೆನಿ ದೂರಸಂಪರ್ಕ ಗ್ರಾಹಕ ರಕ್ಷಣೆ ಮತ್ತು ಕುಂದುಕೊರತೆಗಳ ನಿವಾರಣಾ ನಿಯಮ-2007ರ ಪ್ರಕಾರ ಕಾನೂನು ಉಲ್ಲಂಘಿಸಿದ್ದು, ಮತ್ತೆ ಅದೇ ಸಂಖ್ಯೆಯನ್ನು ಆಕ್ಟಿವೇಟ್ ಮಾಡುವಂತೆ ಹಾಗೂ ದಂಡ ಕಟ್ಟಿ ನಾರಾಯಣ್ ಅವರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದೆ.

Related Stories

No stories found.

Advertisement

X
Kannada Prabha
www.kannadaprabha.com