
ಮುಂಬೈ: ಟಾಟಾ ಸಮೂಹಕ್ಕೆ ಸೇರಿದ ಐತಿಹಾಸಿಕ ಬಾಂಬೆ ಹೌಸ್ ನ ಕೇಂದ್ರ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆದಿರುವುದಾಗಿ ಶುಕ್ರವಾರ ತಿಳಿದುಬಂದಿದೆ.
ಈ ಹಿಂದೆ ಟಾಟಾ ಸಂಸ್ಥೆಯ ಅಧ್ಯಕ್ಷ ಹುದ್ದೆಯಿಂದ ಸೈರಸ್ ಮಿಸ್ಟ್ರಿಯವನ್ನು ಹಠಾತ್ ಆಗಿ ವಜಾಗೊಳಿಸಲಾಗಿತ್ತು. ಇದರಂತೆ ಬಾಂಬೆ ಹೌಸ್ ನಲ್ಲಿರುವ ಟಾಟಾ ಕೇಂದ್ರೀಯ ಕಚೇರಿಯಲ್ಲಿ ಮಂಡಳಿ ಸಭೆಯನ್ನು ನಡೆಸಲಾಗುತ್ತಿತ್ತು. ಸಭೆಗೆ ಟಾಟಾ ಪುತ್ರರು ಆಗಮಿಸುತ್ತಿರುವುದರ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ವರದಿ ಮಾಡಲೆಂದು ಸ್ಥಳದಲ್ಲಿ ಬೀಡುಬಿಟ್ಟಿದ್ದರು.
ಈ ವೇಳೆ ಕೆಲ ಖಾಸಗಿ ಭದ್ರತಾ ಪಡೆಗಳು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಛಾಯಾಗ್ರಾಹಕರೊಬ್ಬರ ಮೇಲೆ 4-5 ಭದ್ರತಾ ಸಿಬ್ಬಂದಿಗಳು ಮುಗಿಬಿದ್ದು ಹಲ್ಲೆ ನಡೆಸಿದ್ದು, ಮಾಧ್ಯಮ ಪ್ರತಿನಿಧಿಗಳ ಕ್ಯಾಮೆರಾಗಳನ್ನು ಕಸಿದುಕೊಂಡಿದ್ದಾರೆ. ಘಟನೆ ವೇಳೆ ಇಬ್ಬರು ಛಾಯಾಗ್ರಾಹಕರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಮಿಡ್-ಡೇ ಪತ್ರಿಕೆಯ ವರದಿಗಾರ ಅತುಲ್ ಕುಂಬ್ಳೆ, ಬಿಸಿನೆಸ್ ಸ್ಟಾಂಡರ್ಡ್ಸ್ ನ ಸೂರ್ಯಕಾಂತ್ ರಿವಾತೆ ಮತ್ತು ಹಿಂದೂಸ್ತಾನ್ ಪತ್ರಿಕೆಯ ಅರಿಜಿತ್ ಸೇನ್ ಎಂಬುವವರಿಗೆ ಗಾಯವಾಗಿದ್ದು, ಸೆಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement