
ನವದೆಹಲಿ: ಸಮಾನ ವೇತನ ಮತ್ತು ಸಮಾನ ಪಿಂಚಣಿ ಯೋಜನೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಯ ಬಳಿ ಸುಳ್ಳು ಹೇಳುತ್ತಿದ್ದಾರೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಾಜಿ ಯೋಧರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಮಾನ ವೇತನ ಮತ್ತು ಸಮಾಜ ಪಿಂಚಣಿ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಯ ಬಳಿ ಸುಳ್ಳನ್ನು ಹೇಳುತ್ತಿದ್ದಾರೆ. ನಿಜ ಹೇಳಬೇಕಂದರೆ ಕೇಂದ್ರ ಸರ್ಕಾರ ಒಆರ್'ಒಪಿಯನ್ನು ಜಾರಿಯೇ ಮಾಡಿಲ್ಲ. ಪಿಂಚಣಿ ಹಣವನ್ನು ನೀಡಿ, ಅದನ್ನೇ ಒಆರ್'ಒಪಿ ಎಂದು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
ಸಮಾನ ವೇತನ ಮತ್ತು ಸಮಾನ ಪಿಂಚಣಿ ಕೇವಲ ಹಣವಲ್ಲ. ಇದು ಯೋಧರ ಗೌರವಕ್ಕೆ ಸಂಬಂಧಿಸಿದ್ದು, ನಮ್ಮ ಯೋಧರಿಗೆ ಸಿಗಬೇಕಿರುವ ನ್ಯಾಯಕ್ಕೆ ಸಂಬಂಧಿಸಿದ್ದು. ಸಮಾನ ವೇತನ ಮತ್ತು ಸಮಾನ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳುತ್ತಿದ್ದಾರೆ. ಒಂದು ವೇಳೆ ಯೋಜನೆ ಜಾರಿಯಾಗಿದ್ದೇ ಆಗಿದ್ದರೆ, ನಮ್ಮ ಮಾಜಿ ಯೋಧರೇಕೆ ದೆಹಲಿಯಲ್ಲಿ ಕಳೆದ 509 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ.
ದೇಶಕ್ಕಾಗಿ ಯೋಧರು ತಮ್ಮ ಪ್ರಾಣವನ್ನು ಒತ್ತೆಯಾಗಿಟ್ಟು ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಬೇಕಿದ್ದು, ಅವರ ಹಕ್ಕನ್ನು ಅವರಿಗೆ ನೀಡಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಯುಪಿಎ ಸರ್ಕಾರ ಪ್ರಸ್ತಾಪಿಸಿದ್ದ ಯೋಜನೆಯನ್ನು ಜಾರಿಗೆ ತರಬೇಕಿದೆ ಎಂದಿದ್ದಾರೆ.
ಇದೇ ವೇಳೆ ಒಆರ್'ಒಪಿ ಜಾರಿಯಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್ ಅವರ ಕುಟುಂಬಸ್ಥರ ಮೇಲೆ ದೌರ್ಜನ್ಯವನ್ನು ಎಸಗಲಾಗಿದೆ ಎಂದಿರುವ ಅವರು, ಮಾಜಿ ಯೋಧನ ಕುಟುಂಬಸ್ಥರ ಮೇಲೆ ಹಲ್ಲೆಯನ್ನು ಮಾಡಲಾಗಿದೆ. ಇದು ಸರಿಯಲ್ಲ. ದೇಶಕ್ಕಾಗಿ ಪ್ರಾಣವನ್ನು ನೀಡಿದ ಯೋಧರಿಗೆ ಸಂಬಂಧಪಟ್ಟ ಜನರೊಂದಿಗೆ ಈ ರೀತಿಯಾಗಿ ಯಾವುದೇ ಸರ್ಕಾರ ನಡೆದುಕೊಂಡಿರಲಿಲ್ಲ. ಮಾಜಿ ಯೋಧರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದಕ್ಕಾಗಿ ಕೂಡಲೇ ಕೇಂದ್ರ ಸರ್ಕಾರ ಕ್ಷಮೆಯಾಚಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
Advertisement