ಅಖಿಲೇಶ್ ಯಾದವ್
ದೇಶ
ಅಖಿಲೇಶ್ ಯಾದವ್ ಇಲ್ಲದೆ ಮಹಾಮೈತ್ರಿ ಅಸಾಧ್ಯ: ಎಸ್ ಪಿಗೆ ಜೆಡಿಯು, ಆರ್ ಎಲ್ ಡಿ
ಮಹಾಮೈತ್ರಿ ಕೂಟ ರಚನೆಯಾಗುವ ಪ್ರಸ್ತಾವನೆಗೆ ಪ್ರತಿಕ್ರಿಯೆ ನೀಡಿರುವ ಆರ್ ಎಲ್ ಡಿ ಹಾಗೂ ಜೆಡಿಯು, ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಅವರಿಲ್ಲದೆ ಮಹಾಮೈತ್ರಿ ರಚನೆ ಅಸಾಧ್ಯ ಎಂದು ಹೇಳಿವೆ.
ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮಹಾಮೈತ್ರಿ ಕೂಟ ರಚನೆಯಾಗುವ ಪ್ರಸ್ತಾವನೆಗೆ ಪ್ರತಿಕ್ರಿಯೆ ನೀಡಿರುವ ಆರ್ ಎಲ್ ಡಿ ಹಾಗೂ ಜೆಡಿಯು, ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಅವರಿಲ್ಲದೆ ಮಹಾಮೈತ್ರಿ ರಚನೆ ಅಸಾಧ್ಯ ಎಂದು ಹೇಳಿವೆ.
ಸಮಾಜವಾದಿ ಪಕ್ಷದಲ್ಲಿ ಅಖಿಲೇಶ್ ಯಾದವ್ ವಿರುದ್ಧ ಎಸ್ ಪಿ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಬಣ ಇದ್ದು, ಎಲ್ ಡಿ ಹಾಗೂ ಜೆಡಿಯು ವಿಧಿಸಿರುವ ಷರತ್ತು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಗೆ ಮಹಾಮೈತ್ರಿಕೂಟ ರಚನೆ ಮಾಡುವುದು ಸವಾಲಾಗಿ ಪರಿಣಮಿಸಿದೆ.
ವರದಿಗಳ ಪ್ರಕಾರ ಜೆಡಿಯು ಹಾಗೂ ಆರ್ ಎಲ್ ಡಿ ಎರಡೂ ಪಕ್ಷಗಳು ಉತ್ತರ ಪ್ರದೇಶದಲ್ಲಿ ಚುನಾವಣಾ ಪೂರ್ವ ಮೈತ್ರಿ ರಚನೆಯಾಗುವುದಿದ್ದರೆ ಅಖಿಲೇಶ್ ಯಾದವ್ ಅವರನ್ನು ಪ್ರಧಾನವಾಗಿ ಪರಿಗಣಿಸುವುದಾಗಿ ತಿಳಿಸಿವೆ. ಇನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿಯನ್ನು ಮುಂಬರುವ ಚುನಾವಣೆಗೆ ಎಸ್ ಪಿ ಯ ನಾಯಕನನ್ನಾಗಿ ಘೋಷಿಸಿದರೆ ಮಾತ್ರ ಮಹಾಮೈತ್ರಿಗೆ ಮುಂದಾಗುವ ಸೂಚನೆ ನೀಡಿದ್ದಾರೆ.
ಸಮಾಜವಾದಿ ಪಕ್ಷದಲ್ಲಿ ಆಂತರಿಕ ಭಿನ್ನಮತಗಳಿದ್ದು, ಆರ್ ಎಲ್ ಡಿ ನಾಯಕ ಅಜಿತ್ ಸಿಂಗ್ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಮೈತ್ರಿಗೆ ಮುಂದಾಗುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಮಹಾಮೈತ್ರಿಯ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಸಹ ಪ್ರತಿಕ್ರಿಯೆ ನೀಡಿದ್ದು, ಉತ್ತರ ಪ್ರದೇಶದಲ್ಲಿ ಬಿಎಸ್ ಪಿ, ಎಸ್ ಪಿ ಒಂದಾದರೆ ಮಾತ್ರ ಮಹಾಮೈತ್ರಿ ಸಾಧ್ಯ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ