ಉಡುಗೊರೆಯಾಗಿ ಕೊಟ್ಟಿರುವ ಖಡ್ಗವನ್ನು ಖಂಡಿತ ಬಳಸುತ್ತೇನೆ: ಅಖಿಲೇಶ್ ಯಾದವ್

ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಶಿವಪಾಲ್ ಯಾದವ್ ಅವರ ವಿರುದ್ಧ ಪರೋಕ್ಷವಾಗಿ ಮಾತನಾಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ರಾಜ್ಯದ ಜನತೆ ನನಗೆ ಖಡ್ಗವನ್ನು ಉಡುಗೊರೆಯಾಗಿ ಕೊಟ್ಟಿದೆ. ಅದನ್ನು ಖಂಡಿತವಾಗಿಯೂ ಉಪಯೋಗಿಸುತ್ತೇನೆಂದು...
ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್
ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್

ಲಖನೌ: ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಶಿವಪಾಲ್ ಯಾದವ್ ಅವರ ವಿರುದ್ಧ ಪರೋಕ್ಷವಾಗಿ ಮಾತನಾಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ರಾಜ್ಯದ ಜನತೆ ನನಗೆ ಖಡ್ಗವನ್ನು ಉಡುಗೊರೆಯಾಗಿ ಕೊಟ್ಟಿದೆ. ಅದನ್ನು ಖಂಡಿತವಾಗಿಯೂ ಉಪಯೋಗಿಸುತ್ತೇನೆಂದು ಶನಿವಾರ ಹೇಳಿದ್ದಾರೆ.

ಈ ಹಿಂದೆ ಸಮಾಜವಾದಿ ಪಕ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಿವಪಾಲ್ ಯಾದವ್ ಅವರು, ಕೆಲವು ಜನಕ್ಕೆ ತಾವು ಏನೂ ಮಾಡದಿದ್ದರೂ ಅಧಿಕಾರ ಬೇಕು, ಇನ್ನೂ ಕೆಲವರು ಪಕ್ಷಕ್ಕಾಗಿ ಏನೆಲ್ಲಾ ತ್ಯಾಗ ಮಾಡಿದರೂ ಅವರಿಗೆ ಏನೂ ಸಿಗಲ್ಲ. ಅಖಿಲೇಶ್ ಅವರು ನನ್ನನ್ನು ಪಕ್ಷದಿಂದ ಉಚ್ಚಾಟಿಸಲಿ, ಅವಮಾನ ಮಾಡಲಿ. ಆದರೆ ಪಕ್ಷಕ್ಕಾಗಿ ನಾನು ರಕ್ತ ಕೊಡಲ ಸಿದ್ಧನಿದ್ದೇನೆ. ಹೀಗಾಗಿಯೇ ಕಳೆದ ನಾಲ್ಕು ವರ್ಷಗಳಲ್ಲಿ ಒಬ್ಬ ಸಚಿವನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆಂದು ಹೇಳಿದ್ದರು.

ಶಿವಪಾಲ್ ಅವರ ಈ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿರುವ ಅಖಿಲೇಶ್ ಯಾದವ್ ಅವರು, ರಾಜ್ಯದ ಜನತೆ ನನಗೆ ಖಡ್ಗವನ್ನು ಉಡುಗೊರೆಯಾಗಿ ನೀಡಿದೆ. ಇದನ್ನು ಖಂಡಿತವಾಗಿಯೂ ಉಪಯೋಗಿಸುತ್ತೇನೆ. ಕೋಮುವಾದಿ ಶಕ್ತಿಗಳ ಹಾದಿ ಯಶಸ್ವಿಯಾಗುವುದಕ್ಕೆ ನಾವು ಬಿಡುವುದಿಲ್ಲ. ಉತ್ತರ ಪ್ರದೇಶದಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆಂದು ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ಉತ್ತರ ಪ್ರದೇಶ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಉತ್ತರಪ್ರದೇಶ ರಾಜ್ಯ ಇತರೆ ರಾಜ್ಯಗಳಿಗೆ ಉದಾಹರಣೆಯಾಗಿ ನಿಲ್ಲುವಂತಹ ಅಭಿವೃದ್ಧಿಯನ್ನು ಕಂಡಿದೆ. ಸಮಾಜವಾದಿ ಪಕ್ಷಕ್ಕೆ ಮುಲಾಯಂ ಯಾದವ್ ಅವರು ನೀಡಿರುವ ಕೊಡುಗೆಯೇ ಇದಕ್ಕೆಲ್ಲಾ ಕಾರಣವಾಗಿದೆ. ಪಕ್ಷವನ್ನು ಕಟ್ಟಲು ನೇತಾಜಿಯವರು ಸಾಕಷ್ಟು ಶ್ರಮವನ್ನು ಪಟ್ಟಿದ್ದಾರೆ. ಅವರ ಶ್ರಮ ಹಾಗೂ ತ್ಯಾಗಕ್ಕೆ ನಾನು ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.

ಈಗಾಗಲೇ ನಾವು ಸಾಕಷ್ಟು ಸುದೀರ್ಘ ಹಾದಿಯನ್ನು ತಲುಪಿದ್ದೇವೆ. ಇದೀಗ ಸಮಾಜವಾದಿ ಪಕ್ಷವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕಿದೆ. ಈ ಕೆಲಸಕ್ಕಾಗಿ ಎಲ್ಲರೂ ಒಟ್ಟಾಗಿ ಕೈಜೋಡಿಸಿ ಕೆಲಸವನ್ನು ಮಾಡಬೇಕಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com