ತಮ್ಮದೇ ಬಲೆಯಲ್ಲಿ ಸಿಲುಕಿದರಾ ಕಾಶ್ಮೀರ ಪ್ರತ್ಯೇಕತಾವಾದಿಗಳು?

ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯನ್ನು ಮುಂದುವರೆಸಲು ತೀರ್ಮಾನಿಸಿದ್ದ ಪ್ರತ್ಯೇಕತಾವಾದಿಗಳ ನಡೆಯಲ್ಲಿ ತರ್ಕಬದ್ಧವಿಚಾರಗಳು ಕಣ್ಮರೆಯಾಗಿರುವುದು ಪ್ರತ್ಯೇಕತಾವಾದಿಗಳಿಗೆ ಈಗ ಮುಳುವಾಗಿ ಪರಿಣಮಿಸಿದೆ.
ತಮ್ಮದೇ ಬಲೆಯಲ್ಲಿ ಸಿಲುಕಿದರಾ ಕಾಶ್ಮೀರ ಪ್ರತ್ಯೇಕತಾವಾದಿಗಳು?
ಶ್ರೀನಗರ: ನಿರೀಕ್ಷೆಯಂತೆಯೇ ಪ್ರತ್ಯೇಕತಾವಾದಿಗಳು ಮತ್ತೊಮ್ಮೆ ಪ್ರತಿಭಟನೆಗೆ ಕರೆ ನೀಡಿದ್ದು, ಕಾಶ್ಮೀರದಲ್ಲಿ ಉಂಟಾಗಿರುವ ಅಶಾಂತಿಯ ವಾತಾವರಣ ನವೆಂಬರ್ 17 ವರೆಗೆ ಮುಂದುವರೆಯುವಂತೆ ಮಾಡಿದ್ದಾರೆ. 
ಜು.9ರಂದು ಕಾಶ್ಮೀರದಲ್ಲಿ ಉಂಟಾದ ಉದ್ವಿಗ್ನ ವಾತಾವರಣ ಸತತ 5 ನೇ ತಿಂಗಳಲ್ಲೂ ಮುಂದುವರೆದಿದ್ದು, ಕನಿಷ್ಟ 95 ಜನರು ಸಾವನ್ನಪ್ಪಿದ್ದು, 12,000 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಪೆಲ್ಲೆಟ್  ಗುಂಡೇಟಿಗೆ ಗುರಿಯಾಗಿದ್ದ 100 ಜನರು ದೃಷ್ಟಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.  
ಕಾಶ್ಮೀರದ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರುವ ನಿಟ್ಟಿನಲ್ಲಿ ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಗಿದ್ದರೂ ಸಹ ಕಣಿವೆಯಲ್ಲಿ ಅಹಿತಕರ ವಾತಾವರಣ ಮುಂದುವರೆಸುವಲ್ಲಿ ಬಂಧಿತ ನಾಯಕರು ಯಶಸ್ವಿಯಾಗಿದ್ದಾರೆ. ಆದರೆ ಪ್ರತ್ಯೇಕತಾವಾದಿಗಳು ಪ್ರಾರಂಭಿಸಿರುವ ಪ್ರತಿಭಟನೆಗಳ ಪರ್ವ ಈಗ ಅವರಿಗೇ ಮುಳುವಾಗುವ ಸಾಧ್ಯತೆ ಇದೆ. 
ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯನ್ನು ಮುಂದುವರೆಸಲು ತೀರ್ಮಾನಿಸಿದ್ದ ಪ್ರತ್ಯೇಕತಾವಾದಿಗಳ ನಡೆಯಲ್ಲಿ ತರ್ಕಬದ್ಧವಿಚಾರಗಳು ಕಣ್ಮರೆಯಾಗಿರುವುದು ಪ್ರತ್ಯೇಕತಾವಾದಿಗಳಿಗೆ ಈಗ ಮುಳುವಾಗಿ ಪರಿಣಮಿಸಿದೆ. ಇದೇ ವೇಳೆ ವ್ಯಾಪಾರಿಗಳು, ವಕೀಲರು, ಶಿಕ್ಷಣ ತಜ್ಞರು ಮತ್ತು ನಾಗರಿಕ ಸಮಾಜದ ಸದಸ್ಯರೊಂದಿಗೆ ಸಭೆ ನಡೆಸಿರುವ ಪ್ರತ್ಯೇಕತಾವಾದಿಗಳು ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. 
ಸಭೆ ನಡೆಯುತ್ತಿದ್ದ ಪ್ರತ್ಯೇಕತಾವಾದಿ ಗಿಲಾನಿ ನಿವಾಸದ ಎದುರು ಕೆಲವು ಯುವಕರು ಪ್ರತಿಭಟನೆ ನಡೆಸಿದ್ದು, ಕಣಿವೆಯಲ್ಲಿ ಕರೆ ನೀಡಲಾಗಿರುವ ಪ್ರತಿಭಟನೆ ಹಾಗೂ ಪ್ರತ್ಯೇಕತಾವಾದಿಗಳ ತತ್ವಗಳನ್ನು ಕೈಬಿಡಬಾರದು ಎಂದು ಆಗ್ರಹಿಸಿದ್ದಾರೆ. ಯುವಕರ ಪ್ರತಿಭಟನೆಯಿಂದ ಎಚ್ಚೆತ್ತ ಪ್ರತ್ಯೇಕತಾವಾದಿ ಮಲಿಕ್ ಪ್ರತಿಭಟನೆ, ಪ್ರತ್ಯೇಕತವಾದಿಗಳ ತತ್ವಗಳನ್ನು ಕೈಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಒಂದೆಡೆ ಪ್ರತ್ಯೇಕತಾವಾದಿಗಳ ಪ್ರತಿಭಟನೆ ಅಪ್ರಸ್ತುತವಾಗುತ್ತಿದ್ದು, ಮತ್ತೊಂದೆಡೆ ಪ್ರತಿಭಟನೆಯನ್ನು ಮುಂದುವರೆಸಬೇಕೆಂದು ಒಂದಷ್ಟು ಗುಂಪು ಒತ್ತಾಯಿಸುತ್ತಿರುವುದು ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಪ್ರತಿಭಟನೆ ಮುಂದುವರೆಸಲಿಕ್ಕೂ ಆಗದೇ ಅರ್ಧದಲ್ಲೇ ಕೈಬಿಡಲೂ ಸಾಧ್ಯವಾಗದೇ ತಮ್ಮ ಬಲೆಗೆ ಸಿಲುಕಿಕೊಂಡಿದ್ದಾರೆ ಎಂದು ವಿಶ್ಲೇಷಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com