ಹಣ ಬದಲಾವಣೆ ಮಾಡಿಕೊಂಡವರ ಬೆರಳಿಗೆ ಇನ್ಮುಂದೆ ಇಂಕ್ ಗುರುತು!

ನೋಟು ನಿಷೇಧದ ಬೆನ್ನಲ್ಲೇ ಹಣವನ್ನು ಬದಲಾಯಿಸುವ ಪ್ರಕ್ರಿಯೆ ವ್ಯಾಪಕವಾಗಿದ್ದು, ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹಣ ಬದಲಾಯಿಸುವ ವ್ಯಕ್ತಿಗಳ ಕೈಗೆ ಶಾಹಿಯನ್ನು ಹಾಕಲಾಗುತ್ತದೆ ಎಂದು ತಿಳಿದುಬಂದಿದೆ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ನೋಟು ನಿಷೇಧದ ಬೆನ್ನಲ್ಲೇ ಹಣವನ್ನು ಬದಲಾಯಿಸುವ ಪ್ರಕ್ರಿಯೆ ವ್ಯಾಪಕವಾಗಿದ್ದು, ಒಂದಕ್ಕಿಂತ ಹೆಚ್ಚು ಬಾರಿ ಹಣ ಬದಲಾವಣೆಗೆ ಮುಂದಾಗುವ ಮಂದಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹಣ ಬದಲಾಯಿಸುವ ವ್ಯಕ್ತಿಗಳ ಕೈಗೆ ಶಾಹಿಯನ್ನು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ಈ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿತ್ತ ಇಲಾಖೆಯ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು, ವ್ಯಕ್ತಿಯೊಬ್ಬರು ಒಂದಕ್ಕಿಂತ ಹೆಚ್ಚು ಬಾರಿ ಹಣ ಬದಲಾವಣೆಗೆ ಮುಂದಾದರೆ ಇತರರಿಗೆ ತೊಂದರೆಯಾಗುತ್ತದೆ. ಹೀಗಾಗಿ ಬ್ಯಾಂಕುಗಳಲ್ಲಿ ಹಣ ಬದಲಾವಣೆ ಮಾಡುವ ವ್ಯಕ್ತಿಯ ಕೈಗೆ ಇನ್ನು ಮುಂದೆ ಇಂಕ್ ಹಾಕಲಾಗುತ್ತದೆ. ಆ ಮೂಲಕ ಒಂದಕ್ಕಿಂತ ಹೆಚ್ಚುಬಾರಿ ಹಣ ಬದಲಾವಣೆ ಮಾಡುವ ಪ್ರಕ್ರಿಯೆಗೆ ಕಡಿವಾಣ ಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಕೇವಲ ಒಂದು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಅಧಿಕಾರಿಗಳೊಂದಿಗೆ ಪರಾಮರ್ಶೆ ನಡೆಸಿದ್ದು, ಬಿಕ್ಕಟ್ಟಿನ ಕುರಿತಂತೆ ಮಾಹಿತಿ ಪಡೆದಿದ್ದಾರೆ. ನೋಟುಗಳ ರವಾನೆ  ಹಾಗೂ ಅವುಗಳ ಹಂಚಿಕೆ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಪ್ರಧಾನಿ ಮೋದಿ ಕೆಲವು ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಗಳಂತೆ ಹಣ ಬದಲಾವಣೆ ಮಾಡುವ ಜನರ ಕೈಗೆ ಅಳಿಸಲಾಗದ ಇಂಕ್ ಹಾಕಲಾಗುತ್ತದೆ. ಆ ಮೂಲಕ ಜನ ಒಂದಕ್ಕಿಂತ ಹೆಚ್ಚು ಬಾರಿ ಹಣ ಬದಲಾವಣೆ ಮಾಡದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಅಂತೆಯೇ ಮಾರುಕಟ್ಟೆಯಲ್ಲಿ ಕಪ್ಪುಹಣ ಚಲಾವಣೆ  ಕುರಿತಂತೆ ನಿಗಾ ಇಡಲು ವಿಶೇಷ ತಂಡವನ್ನು ರಚಿಸಲಾಗಿದ್ದು, ನಕಲಿ ಹಣ ಹೆಚ್ಚಾಗಿ ಚಲಾವಣೆಯಾಗುವ ಸೂಕ್ಷ್ಮ ಪ್ರದೇಶಗಳಲ್ಲಿ ಈ ತಂಡ ಹೆಚ್ಚಾಗಿ ಕಾರ್ಯ ನಿರ್ಹಸಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಇದೇ ವೇಳೆ ಧಾರ್ಮಿಕ ಕೇಂದ್ರಗಳ ಕುರಿತು ಮಾತನಾಡಿದ ಶಕ್ತಿಕಾಂತ್ ದಾಸ್ ಅವರು, ದೇಶದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ನಿಶೇಧಕ್ಕೆ ಒಳಗಾಗಿರುವ ಹಳೆಯ ನೋಟುಗಳು ಹೆಚ್ಚಾಗಿ ಸಂಗ್ರಹವಾಗುತ್ತಿರುವ ಕುರಿತು ಮಾಹಿತಿ  ಬಂದಿದೆ. ಹೀಗಾಗಿ ಕೂಡಲೇ ಎಲ್ಲ ಧಾರ್ಮಿಕ ಸಂಸ್ಥೆಯ ಆಡಳಿತ ಸಿಬ್ಬಂದಿಗಳು ಆ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಜನರು ಯಾವುದೇ ರೀತಿಯ  ಊಹಾಪೋಹಗಳಿಗೆ ಕಿವಿಗೊಡದಂತೆಯೂ, ಪರಿಸ್ಥಿತಿ ಕೈ ಮೀರಿಲ್ಲ. ಅಗತ್ಯ ಪ್ರಮಾಣದ ನೋಟುಗಳು ಲಭ್ಯವಿದ್ದು, ಅವುಗಳ ಹಂಚಿಕೆಗೆ ಕಾಲಾವಕಾಶ ಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಬ್ಯಾಂಕುಗಳ ಮುಷ್ಕರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಸಂಬಂಧಿಸಿದಂತೆ ಉತ್ತರಿಸಿದ ಶಕ್ತಿಕಾಂತ್ ದಾಸ್ ಅವರು, ಬ್ಯಾಂಕುಗಳ ಮುಷ್ಕರ ಊಹಾಪೋಹ  ಶುದ್ಧ ಸುಳ್ಳು. ಆರ್ಥಿಕ ಬಿಕ್ಕಟ್ಟಿನ ಈ ಸ್ಥಿತಿಯಲ್ಲಿ ಬ್ಯಾಂಕುಗಳು ಮುಷ್ಕರ ಮಾಡುತ್ತಿಲ್ಲ. ಬ್ಯಾಂಕ್ ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ಹೆಚ್ಚುವರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊಸ ನೋಟುಗಳ ಬೇಡಿಕೆ ಮತ್ತು ಅವುಗಳ  ಲಭ್ಯತೆ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚಾಗಿ ಬೇಡಿಕೆ ಇರುವ ಪ್ರದೇಶಗಳಿಗೆ ಹೊಸ ನೋಟುಗಳನ್ನು ಹೆಚ್ಚುವರಿಯಾಗಿ ರವಾನೆ ಮಾಡಲಾಗುತ್ತಿದೆ. ಜನರಿಗೆ ಬೇಕಿರುವಷ್ಟು ಹಣ ಈಗಾಗಲೇ ಬ್ಯಾಂಕುಗಳಲ್ಲಿದ್ದು, ಜನ  ಸಾಮಾಜಿಕ ಜಾಲತಾಣಗಳ ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com