
ಶ್ರೀನಗರ: ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಉಂಟಾಗಿದ್ದ ಹಿಂಸಾಚಾರ ಬಹುತೇಕ ಸ್ಥಗಿತಗೊಂಡಿದ್ದು, ಪ್ರತ್ಯೇಕತಾವಾದ ಮತ್ತು ಪ್ರತ್ಯೇಕತಾವಾದಿಗಳನ್ನು ನಿರಾಕರಿಸಿರುವ ಕಾಶ್ಮೀರ ವಿದ್ಯಾರ್ಥಿಗಳು ಅತೀ ಹೆಚ್ಚು ಪ್ರಮಾಣದಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಿದ್ದಾರೆ.
ಕಣಿವೆ ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಒತ್ತಾಯಪೂರ್ವಕವಾಗಿ ಬಂದ್ ಮಾಡಲಾಗಿದ್ದ ಶಾಲಾ-ಕಾಲೇಜುಗಳು ನಿನ್ನೆಯಿಂದ ಆರಂಭವಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಗಳು ಕೂಡ ಆರಂಭವಾಗಿವೆ. ಪ್ರಮುಖ ವಿಚಾರವೆಂದರೆ ಪ್ರತ್ಯೇಕತಾವಾದಿಗಳ ಬಹಿಷ್ಕಾರದ ನಡುವೆಯೂ ನಿನ್ನೆಯಿಂದ ಆರಂಭವಾಗಿರುವ ಪರೀಕ್ಷೆಗೆ ಶೇ.95ರಷ್ಟು ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ಪ್ರತ್ಯೇಕತಾವಾದವನ್ನು ಮತ್ತು ಪ್ರತ್ಯೇಕತಾವಾದಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.
ಪರೀಕ್ಷಾ ಆರಂಭದಲ್ಲಿ ಹಿಂಸಾಚಾರ ಹಾಗೂ ಪ್ರತ್ಯೇಕತಾವಾದಿಗಳ ಬಹಿಷ್ಕಾರದಿಂದಾಗಿ ವಿದ್ಯಾರ್ಥಿಗಳು ಗರಿಷ್ಟ ಪ್ರಮಾಣದಲ್ಲಿ ಪರೀಕ್ಷೆಗೆ ಹಾಜರಾಗುವ ಕುರಿತು ಶಂಕೆ ವ್ಯಕ್ತವಾಗಿತ್ತು. ಆದರೆ ಕಾಶ್ಮೀರದಲ್ಲಿ ಮತ್ತೆ ಶಾಂತಿ ಸ್ಥಾಪನೆಯಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಅತೀ ಹೆಚ್ಚು ಪ್ರಮಾಣದಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಮಂಗಳವಾರದಿಂದ ಹತ್ತನೇ ತರಗತಿಯ ಪರೀಕ್ಷೆಗಳು ಆರಂಭವಾಗಿವೆ. ಡಿಸೆಂಬರ್ 3ರವರೆಗೂ ಪರೀಕ್ಷೆಗಳು ನಡೆಯಲಿದ್ದು, ರಾಜ್ಯಾದ್ಯಂತ ವ್ಯಾಪಕ ಭದ್ರತೆ ಒದಗಿಸಲಾಗಿದೆ.
ಸುಮಾರು 1 ಸಾವಿರಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕಳೆದ ಆರು ತಿಂಗಳುಗಳಿಂದ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿದ್ದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಗೈರಾಗಿದ್ದರು. ಹೀಗಾಗಿ ಅಂತಿಮ ಪರೀಕ್ಷೆಯ ಪಠ್ಯಗಳಲ್ಲಿ ಶೇ50ರಷ್ಟನ್ನು ಮೊಟಕುಗೊಳಿಸಲಾಗಿದೆ. ಪರೀಕ್ಷೆ ನಡೆಯುವ ಶಾಲಾ ಕಾಲೇಜುಗಳ ಸುತ್ತಮುತ್ತ ಭಾರತೀಯ ಸೇನೆಯ ವಿವಿಧ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಶಸ್ತ್ರಸಜ್ಜಿತ ಯೋಧರು ಭದ್ರತೆಯ ಮೇಲುಸ್ತುವಾರಿ ನೋಡುಕೊಳ್ಳುತ್ತಿದ್ದಾರೆ.
ಇನ್ನು ಕಳೆದ ನಾಲ್ಕೈದು ತಿಂಗಳಿನಿಂದ ಕಣಿವೆ ರಾಜ್ಯದಲ್ಲಿ ನಡೆಯುತ್ತಿದ್ದ ಹಿಂಸಾಚಾರ ಈಗಷ್ಟೇ ಶಾಂತವಾಗುತ್ತಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಬರೊಬ್ಬರಿ 30ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದರು.
Advertisement