ನೋಟುಗಳ ಹಿಂತೆಗೆತ: ಲೋಕಸಭೆ ಕಲಾಪ ನಾಳೆಗೆ, ರಾಜ್ಯಸಭೆ ಅಪರಾಹ್ನಕ್ಕೆ ಮುಂದೂಡಿಕೆ

ಸಂಸತ್ತಿನ ಚಳಿಗಾಲ ಅಧಿವೇಶನದ ಎರಡನೇ ದಿನವಾದ ಗುರುವಾರದ ಕಲಾಪದಲ್ಲಿ ಸದಸ್ಯರು ಸೇರು...
ಭಾರತದ ಸಂಸತ್ತು(ಸಂಗ್ರಹ ಚಿತ್ರ)
ಭಾರತದ ಸಂಸತ್ತು(ಸಂಗ್ರಹ ಚಿತ್ರ)
ನವದೆಹಲಿ: ಸಂಸತ್ತಿನ ಚಳಿಗಾಲ ಅಧಿವೇಶನದ ಎರಡನೇ ದಿನದ ಇಂದಿನ ಕಲಾಪದಲ್ಲಿ ಸದಸ್ಯರು ಸೇರುತ್ತಿದ್ದಂತೆ ನೋಟು ನಿಷೇಧದ ಚರ್ಚೆಯೇ ಪ್ರಸ್ತಾಪಗೊಂಡಿತು.ಕಾಂಗ್ರೆಸ್, ಸಿಪಿಎಂ, ಬಿಎಸ್ಪಿ, ಜೆಡಿಯು, ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 500 ಮತ್ತು 1000 ನೋಟುಗಳನ್ನು ನಿಷೇಧಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಲೋಕಸಭೆಯಲ್ಲಿ 21 ನಿಲುವಳಿ ನೊಟೀಸ್ ಗಳನ್ನು ಸಲ್ಲಿಸಿ ನಿಲುವಳಿ ಮಂಡನೆಗೆ ಒತ್ತಾಯಿಸಿದವು. 
ಇತ್ತೀಚಿನ ವರದಿ ಬರುವವರೆಗೆ, ನೋಟು ನಿಷೇಧ ವಿಚಾರವಾಗಿ ಎರಡೂ ಸದನಗಳಲ್ಲಿ ತೀವ್ರ ಗದ್ದಲ, ಕೋಲಾಹಲವಾಗುತ್ತಿದೆ. ರಾಜ್ಯಸಭೆಯಲ್ಲಿ ಸದನದ ಬಾವಿಗಿಳಿದ ವಿರೋಧ ಪಕ್ಷದ ಸದಸ್ಯರು ಸರ್ಕಾರದಿಂದ ವಿವರಣೆ ಕೇಳಿದರು. ತೀವ್ರ ಕೋಲಾಹಲವೆದ್ದ ಕಾರಣದಲ್ಲಿ ರಾಜ್ಯಸಭೆ ಕಲಾಪವನ್ನು ಸಭಾಪತಿಗಳು ಮಧ್ಯಾಹ್ನ 2 ಗಂಟೆಗೆ ಮುಂದೂಡಿದ್ದಾರೆ.
ಇನ್ನೊಂದೆಡೆ ನೋಟುಗಳ ಹಿಂತೆಗೆತ ವಿಚಾರವಾಗಿ ಸಂಸತ್ತು ಆವರಣದೊಳಗಿರುವ ಗಾಂಧಿ ಪ್ರತಿಮೆ ಎದುರು ಟಿಎಂಸಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ ಜೆಡಿಯು ನಾಯಕ ಶರದ್ ಯಾದವ್, 500, 1000 ನೋಟುಗಳನ್ನು ನಿಷೇಧಿಸುವ ಮೂಲಕ ಎಲ್ಲೆಡೆ ಅರಾಜಕತೆಯುಂಟಾಗಿದ್ದು ಪ್ರತಿಯೊಂದು ಕಾರ್ಯ ಸ್ಥಗಿತಗೊಂಡಿದೆ. ಸರ್ಕಾರದ ನೋಟು ನಿಷೇಧ ನಿರ್ಧಾರ ಸೋರಿಕೆಯಾಗಿತ್ತು ಎಂಬ ವರದಿಗೆ ಜಂಟಿ ಸದನ ಸಮಿತಿಯಲ್ಲಿ ಉತ್ತರಿಸಲಿ ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಸರ್ಕಾರ ಸ್ವೀಕರಿಸಲಿ ಎಂದು ಟ್ವೀಟ್ ಮಾಡಿದ್ದಾರೆ. ದೇಶದ ಗ್ರಾಮೀಣ ಭಾಗಗಳಲ್ಲಿ ತೀವ್ರ ಅರಾಜಕತೆಯುಂಟಾಗಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ಭಂಗವುಂಟಾಗಬಹುದು ಎಂಬ ಭೀತಿಯನ್ನು ಅವರು ಇನ್ನೊಂದು ಟ್ವೀಟ್ ನಲ್ಲಿ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com