ಮುಂಬೈ: ಕೇಂದ್ರ ಸರ್ಕಾರ 500 ಹಾಗೂ 1000 ನೋಟ್ ನಿಷೇಧಿಸಿದ ನಂತರ ದೇಶಾದ್ಯಂತ ಜನ ಹಣಕ್ಕಾಗಿ ಪರದಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವರೊಬ್ಬರ ಕಾರಿನಲ್ಲಿದ್ದ 91 ಲಕ್ಷ ರುಪಾಯಿ ನಗದನ್ನು ಜಪ್ತಿ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣ ಹಣ ಸಾಗಾಟದ ಬಗ್ಗೆ ಎಚ್ಚರ ವಹಿಸಿದ್ದ ಚುನಾವಣಾ ಅಧಿಕಾರಿಗಳು ಇಂದು ಮಹಾ ಸಚಿವ ಸುಭಾಷ್ ದೇಶಮುಖ್ ನಿಷೇಧಿತ 1000 ರುಪಾಯಿ ಮೌಲ್ಯದ 91 ಲಕ್ಷ ರುಪಾಯಿಯನ್ನು ಜಪ್ತಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ದೇಶಮುಖ್ ಅವರು, ಅದು ಕಪ್ಪು ಹಣವಲ್ಲ. ಆ ಹಣಕ್ಕೆ ತಮ್ಮ ಬಳಿ ತಾಖಲೆ ಇದ್ದು, ಆದಾಯ ತೆರಿಗೆ ಇಲಾಖೆಯ ತನಿಖೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಕಾರಿನಲ್ಲಿ ಪತ್ತೆಯಾದ ಹಣ ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ಸಾಗಿಸಲಾಗುತ್ತಿತ್ತು ಎಂದು ಮಹಾರಾಷ್ಟ್ರ ಸಹಕಾರ ಸಚಿವ ದೇಶಮುಖ್ ಅವರು ಹೇಳಿದ್ದಾರೆ.