
ಶ್ರೀನಗರ: ನೋಟು ನಿಷೇಧದ ಬಳಿಕ ಉಗ್ರರ ಆರ್ಥಿಕತೆ ಕಡಿವಾಣ ಹಾಕಿದ್ದೇವೆ ಎಂದು ಕೇಂದ್ರ ಸರ್ಕಾರ ಬೆನ್ನುತಟ್ಟಿಕೊಳ್ಳುತ್ತಿರುವಂತೆಯೇ ಅತ್ತ ಜಮ್ಮು ಮತ್ತು ಕಾಶ್ಮೀರದಲ್ಲಾಗಲೇ 2000 ರು. ಮುಖಬೆಲೆಯ ಹೊಸ ನೋಟುಗಳು ಉಗ್ರರ ಕೈ ಸೇರಿವೆ.
ಬಂಡಿಪೊರಾದಲ್ಲಿ ನಡೆದ ಉಗ್ರರ ವಿರುದ್ಧ ಎನ್ ಕೌಂಟರ್ ಪ್ರಕರಣದಲ್ಲಿ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹತ್ಯೆಗೈದಿತ್ತು. ಉಗ್ರ ಹತ್ಯೆ ಬಳಿಕ ಅವರ ಪರಿಶೀಲನೆ ನಡೆಸಿದಾಗ ಅವರ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳು ಸೇರಿದಂತೆ 2000 ರು. ಮುಖಬೆಲೆಯ 2 ನೋಟುಗಳು ಪತ್ತೆಯಾಗಿವೆ. ಇಬ್ಬರೂ ಉಗ್ರರು ತಲಾ 15 ಸಾವಿರ ನಗದು ಹಣವನ್ನು ಹೊಂದಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.ಮೃತ ಇಬ್ಬರೂ ಉಗ್ರರು ಲಷ್ಕರ್ ಸಂಘಟನೆಗೆ ಸೇರಿದವರಾಗಿದ್ದು, ಉಗ್ರರ ಹಿನ್ನಲೆ ಕುರಿತಂತೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಹತರಾದ ಉಗ್ರರು ಸ್ಥಳೀಯರೇ ಅಥವಾ ಸ್ಥಳೀಯರಿಂದ ನೆರವು ಪಡೆದವರೇ?
ಮತ್ತೊಂದೆಡೆ ಹತರಾದ ಉಗ್ರರ ಬಳಿ ಹೊಸ ನೋಟುಗಳು ಪತ್ತೆಯಾಗುವ ಮೂಲಕ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಹತರಾದ ಉಗ್ರರು ಸ್ಥಳೀಯರೇ ಅಥವಾ ಸ್ಥಳೀಯರಿಂದ ನೆರವು ಪಡೆದು ದಾಳಿ ನಡೆಸುತ್ತಿದ್ದಾರೆಯೇ ಎಂಬ ಅನುಮಾನಗಳು ಮೂಡುತ್ತಿವೆ. ಇನ್ನು ಇದಕ್ಕೆ ಇಂಬು ನೀಡುವಂತೆ ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಮೇಲೆ ದಾಳಿ ನಡೆಸಿದ್ದ ನಾಲ್ಕು ಮಂದಿ ಶಸ್ತ್ರಸಜ್ಜಿತ ಉಗ್ರರು ಬಂದೂಕಿನಿಂದ ಸಿಬ್ಬಂದಿಗಳನ್ನು ಬೆದರಿಸಿ ಸುಮಾರು 16 ಲಕ್ಷ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಹಣವೇನಾದರೂ ಉಗ್ರರ ಕೈ ಸೇರಿರಬಹುದೇ ಎಂಬ ವಿಚಾರದ ಕುರಿತಾಗಿಯೂ ಸೇನಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಇದೀಗ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಅಣಕಿಸುವಂತಿದ್ದು, ಸಾಕಷ್ಟು ಮುಂಜಾಗ್ರತೆ ಇದ್ದರೂ ಹೊಸ ನೋಟುಗಳು ಉಗ್ರರ ಕೈ ಸೇರಿದ್ದು ಹೇಗೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದ್ದು, ಉಗ್ರರ ಆರ್ಥಿಕ ಮೂಲವನ್ನು ನಿರ್ಮೂಲನೆ ಮಾಡಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement