
ವಿಜಯವಾಡ: ನೋಟು ನಿಷೇಧದ ಬಳಿಕ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರೆದಿರುವಂತೆಯೇ ವಿಭಜಿತ ಆಂಧ್ರ ಪ್ರದೇಶ ಸರ್ಕಾರ ನಗದು ರಹಿತ ವಹಿವಾಟು ಪ್ರೋತ್ಸಾಹಕ್ಕೆ ಮುಂದಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಸ್ಮಾರ್ಟ್ ವಿತರಿಸುವ ಕುರಿತು ಚಿಂತನೆಯಲ್ಲಿ ತೊಡಗಿದೆ.
ನೋಟು ರದ್ದತಿ ಬಳಿಕ ನಗದು ರೂಪದಲ್ಲಿ ವ್ಯವಹರಿಸುವುದು ಕಷ್ಟವಾಗಿದ್ದು, ನಗದು ರಹಿತ ಅಥವಾ ಡಿಜಿಟಲ್ ವ್ಯವಹಾರ ನಡೆಸಲು ಮೊಬೈಲ್ ಫೋನ್‌ಗಳ ಅಗತ್ಯವಿರುವ ಕಾರಣ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಈ ಕುರಿತು ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ ಈಗಾಗಲೇ ಮುಖ್ಯಮಂತ್ರಿ ನಾಯ್ಡು ನೇತೃತ್ವದಲ್ಲಿ 2 ಸುತ್ತಿನ ಚರ್ಚೆ ನಡೆದಿದ್ದು, ಬುಧವಾರ ನಡೆದ ಚರ್ಚೆಯಲ್ಲಿ ಸಿಎಂ ನಾಯ್ಡು, ನೋಟು ನಿಷೇಧದ ಬಳಿಕ ರಾಜ್ಯದ ಬಡ ಹಾಗೂ ಮಧ್ಯಮವರ್ಗದ ಜನರ ಆರ್ಥಿಕ ವಹಿವಾಟಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇದಾದ ಬಳಿಕ ಅಂದರೆ ನಿನ್ನೆ ನಡೆದ ಸಭೆಯಲ್ಲಿ ಸಿಎಂ ನಾಯ್ಡು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಅಧಿಕಾರಿಗಳು ರಾಜ್ಯಜದಲ್ಲಿ ಸುಮಾರು 20 ಲಕ್ಷ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ವೇಳೆ 20 ಲಕ್ಷ ಕುಟುಂಬಗಳಿಗೆ ವಿತರಿಸಲು ಬೇಕಾದ ಬೇಸಿಕ್ ಮಾಡಲ್ ಸ್ಮಾರ್ಟ್ ಫೋನ್ ಒಂದಕ್ಕೆ ಕನಿಷ್ಟ 500 ರು.ಗಳು ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ಚಂದ್ರಬಾಬು ನಾಯ್ಡು ಅವರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಬೃಹತ್ ಪ್ರಮಾಣದಲ್ಲಿ ಬಡವರಿಗೆ ಸ್ಮಾರ್ಟ್ ಫೋನ್ ಹಂಚುವ ಕುರಿತು ನಿರ್ಧರಿಸಿರುವ ಸಿಎಂ ನಾಯ್ಡು ಅವರು ಅಗತ್ಯ ಬಿದ್ದರೆ, ಸಾರ್ವಜನಿಕ ವಲಯ, ಬ್ಯಾಂಕ್ ಗಳು ಮತ್ತು ನೆಟವರ್ಕ್ ಸೇವೆ ಒದಗಿಸುವವರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಬಡವರಿಗೆ ನಗದು ರಹಿತ ಬ್ಯಾಂಕಿಂಗ್ ಸೇವೆ ಒದಗಿಸಲು ನೆರವು ನೀಡಬೇಕು ಎಂದು ಹೇಳಿದರು.
Advertisement