ನವದೆಹಲಿ: ಮಹತ್ತರ ಬೆಳವಣಿಗೆಯಲ್ಲಿ ಕೇಂದ್ರ ರೈಲ್ವೇ ಇಲಾಖೆ ತನ್ನ ಅರ್ಜಿಯಲ್ಲಿ ಮೂರನೇ ಲಿಂಗದವರಿಗೆ ಅವಕಾಶ ಕಲ್ಪಿಸಿದ್ದು, ತನ್ನ ಅರ್ಜಿಗಳಲ್ಲಿ ತೃತೀಯ ಲಿಂಗಿಯರನ್ನು ಸೇರ್ಪಡೆಗೊಳಿಸಿದೆ.
ಭಾರತೀಯ ರೈಲ್ವೆ ಮತ್ತು ಐ.ಆರ್.ಸಿ.ಟಿ.ಸಿಯು ಮುಂಗಡ ಟಿಕೆಟ್ ಹಾಗೂ ಟಿಕೆಟ್ ರದ್ದುಗೊಳಿಸುವ ಅರ್ಜಿಯಲ್ಲಿ ಪುರುಷ ಹಾಗೂ ಮಹಿಳೆಯೊಂದಿಗೆ ತೃತೀಯ ಲಿಂಗಿಯರನ್ನು ಸೇರ್ಪಡೆಗೊಳಿಸಿದೆ. ಈ ಹಿಂದೆ ಅಪೆಕ್ಸ್ ಕೋರ್ಟ್ ಆದೇಶದಂತೆ ಅರ್ಜಿಗಳಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅದರಂತೆ ಇಂದಿನಿಂದ ನೂತನ ಅರ್ಜಿಗಳನ್ನು ಹೊರತರಲಾಗಿದ್ದು, ಅರ್ಜಿಯಲ್ಲಿ ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಎಂಬ ಮೂರು ಲಿಂಗಗಳಿಗೆ ಅವಕಾಶ ನೀಡಲಾಗಿದೆ.
ದೆಹಲಿ ಮೂಲದ ವಕೀಲರೊಬ್ಬರು ಹೈಕೋರ್ಟ್ ನಲ್ಲಿ ಕಳೆದ ಫೆಬ್ರವರಿಯಲ್ಲಿ ತೃತೀಯ ಲಿಂಗಿಗಳಿಗೆ ಮಾನ್ಯತೆ ನೀಡುವ ಕುರಿತು ಅರ್ಜಿ ಸಲ್ಲಿಸಿದ್ದರು. ವಕೀಲ ಜಮ್ಶೆಡ್ ಅನ್ಸಾರಿ ಅವರು, ‘ತೃತೀಯ ಲಿಂಗಿ’ ಗಳನ್ನು ಅರ್ಜಿಗಳಲ್ಲಿ ಲಿಂಗಗಳ ಪಟ್ಟಿಯಲ್ಲಿ ಸೇರಿಸದಿರುವುದಕ್ಕೆ ಐ.ಆರ್.ಸಿ.ಟಿ.ಸಿ ನ ಪರಿಚ್ಛೇದ 14,15,19 ಮತ್ತು 21 ರ ನಿಯಮ ಉಲ್ಲಂಘನೆಗಾಗಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಅರ್ಜಿಗಳಲ್ಲಿ ಮಾತ್ರವಲ್ಲದೆ, ರೈಲುಗಳಲ್ಲಿ ತೃತೀಯ ಲಿಂಗಿಗಳ ಸುರಕ್ಷತಾ ದೃಷ್ಟಿಯಿಂದ ವಿಶೇಷ ಬೋಗಿ ಹಾಗೂ ಸೀಟುಗಳನ್ನು ಒದಗಿಸುವ ಕುರಿತು ಬೇಡಿಕೆ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಾಧೀಶರಾದ ಜಿ.ರೋಹಿಣಿ ನೇತೃತ್ವದ ಪೀಠವು ರೈಲ್ವೇ ಇಲಾಖೆ ಅರ್ಜಿ ಕುರಿತಂತೆ ಚರ್ಚೆ ನಡೆಸಲು ತಿಳಿಸಿತ್ತು. ಈ ನಡುವೆ ಏಪ್ರಿಲ್ 2014ರ ನ್ಯಾಯಾಲಯದ ನಿರ್ದೇಶನದ ಮೇರೆಗೆ, ಕೇಂದ್ರ ರೈಲ್ವೇ ಸಚಿವಾಲಯವು, ಹಕ್ಕು ರಕ್ಷಣೆಯಡಿಯಲ್ಲಿ ಮಂಗಳಮುಖಿಯರಿಗೆ ತೃತೀಯ ಲಿಂಗಿಗಳು ಎಂಬ ಮಾನ್ಯತೆ ನೀಡಲಾಗುವುದು ಎಂದು ಹೇಳಿತ್ತು. ಮುಂಗಡ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಟಿಕೆಟ್ ರದ್ದುಗೊಳಿಸುವ ಅರ್ಜಿಯಲ್ಲಿ ತೃತೀಯ ಲಿಂಗಿ ಸೇರ್ಪಡೆ ಮತ್ತು ಪೂರ್ಣ ದರದ ಟಿಕೆಟ್ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಇದರ ಅನುಷ್ಠಾನ ಈಗ ರೈಲ್ವೇ ಇಲಾಖೆ ಮಾಡಿದ್ದು, ಅರ್ಜಿಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಿದೆ.
Advertisement