ನಭಾ ಜೈಲು ದಾಳಿಯಲ್ಲಿ ಪಾಕಿಸ್ತಾನದ ಕೈವಾಡ: ಸುಖ್ ಬೀರ್ ಬಾದಲ್ ಗಂಭೀರ ಆರೋಪ
ಚಂಡೀಘಡ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಪಂಜಾಬ್ ನಭಾ ಕೇಂದ್ರೀಯ ಕಾರಾಗೃಹದಿಂದ ಉಗ್ರರು ತಪ್ಪಿಸಿಕೊಂಡಿರುವ ಘಟನೆಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಪಂಜಾಬ್ ಉಪಮುಖ್ಯಮಂತ್ರಿ ಸುಖ್ ಬೀರ್ ಬಾದಲ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಸುಖ್ ಬೀರ್ ಬಾದಲ್ ಅವರು, ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಘಟನೆಯ ಹಿಂದೆ ಪಾಕಿಸ್ತಾನದ ಕೈವಾಡದ ಕುರಿತು ಶಂಕೆ ಮೂಡುತ್ತದೆ. ಸುಮಾರು ಹತ್ತು ಮಂದಿ ಶಸ್ತ್ರಾಸ್ತ್ರಧಾರಿಗಳು ಪೊಲೀಸರ ಮಾರುವೇಷದಲ್ಲಿ ಜೈಲಿಗೆ ಆಗಮಿಸಿ ಇಲ್ಲಿ ಸುಮಾರು 100 ಸುತ್ತು ಗುಂಡು ಹಾರಿಸಿ ತಮ್ಮೊಂದಿಗೆ ನಾಲ್ಕು ಮಂದಿ ಉಗ್ರರನ್ನು ಬಿಡಿಸಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ. ಪರಾರಿಯಾದ ಉಗ್ರರ ಪೈಕಿ ಖಲಿಸ್ತಾನ ಲಿಬರೇಷನ್ ಫೋರ್ಸ್ ನ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಕೂಡ ಓರ್ವನಾಗಿದ್ದು, ಈತ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಹೀಗಾಗಿ ಘಟನೆಯಲ್ಲಿ ಪಾಕಿಸ್ತಾನದ ಕೈವಾಡವಿರಬಹುದು ಎಂದು ಅವರು ಆರೋಪಿಸಿದ್ದಾರೆ.
ಅಜಿತ್ ಧೋವಲ್ ಗೆ ಮಾಹಿತಿ
ಇದೇ ವೇಳೆ ನಭಾ ಜೈಲು ಪರಾರಿ ಪ್ರಕರಣ ಸಂಬಂಧ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಸುಖ್ ಭೀರ್ ಬಾದಲ್ ಅವರು ಮಾಹಿತಿ ನೀಡಿದ್ದು, ಉಗ್ರರ ಶೋಧ ಕಾರ್ಯಾಚರಣೆ ಸಂಬಂಧ ಅಜಿತ್ ಧೋವಲ್ ರಿಂದ ಸಲಹೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ ಜೈಲು ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಕುರಿತಂತೆ ಸುಖ್ ಬೀರ್ ಬಾದಲ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಅಂತರ ಕಾಯ್ದುಕೊಂಡಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ