ನಭಾ ಜೈಲಿನಿಂದ ಉಗ್ರರು ಪರಾರಿ; ಸುಳಿವು ಕೊಟ್ಟವರಿಗೆ 25 ಲಕ್ಷ ರು. ಬಹುಮಾನ
ಚಂಡೀಘಡ: ಪಂಜಾಬ್ ನ ನಭಾ ಜೈಲಿನಿಂದ ಪರಾರಿಯಾಗಿರುವ ಉಗ್ರರ ಶೋಧಕ್ಕಾಗಿ ವ್ಯಾಪಕ ಕ್ರಮ ಕೈಗೊಂಡಿರುವ ಪಂಜಾಬ್ ಸರ್ಕಾರ ಇದೀಗ ಉಗ್ರರ ಕುರಿತು ಸುಳಿವು ನೀಡಿದವರಿಗೆ 25 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ಪರಾರಿಯಾಗಿರುವ ಉಗ್ರರಿಗಾಗಿ ಈಗಾಗಲೇ ಕಾರ್ಯಾಚರಣೆ ಕೈಗೊಂಡಿರುವ ಪಂಜಾಬ್ ಪೊಲೀಸರು ಪಂಜಾಬ್ ನಿಂದ ಪಾಕಿಸ್ತಾನಕ್ಕೆ ಹಾಗೂ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ನಾಕಾಬಂದಿ ಹಾಕಿದ್ದು, ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಇದೇ ವೇಳೆ ಉಗ್ರರು ಪರಾರಿಯಾದ ಸಂದರ್ಭದಲ್ಲಿ ಅಲ್ಲೇ ಸಮೀಪದಲ್ಲಿದ್ದ ಸಿಸಿಟಿವಿಯಲ್ಲಿ ಉಗ್ರರು ಬಳಕೆ ಮಾಡಿದ್ದ ಕಾರಿನ ಚಿತ್ರ ದೊರೆತಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಬಿಳಿ ಕಾರಿನಲ್ಲಿ ಉಗ್ರರು ಪರಾರಿಯಾಗಿರುವುದು ಸ್ಪಷ್ಟವಾಗಿದ್ದು, ಇದೇ ದೃಶ್ಯವನ್ನು ಪಂಜಾಬ್ ನ ಎಲ್ಲ ಪೊಲೀಸ್ ಠಾಣೆಗಳಿಗೆ ರವಾನೆ ಮಾಡಲಾಗಿದೆ.
ಇನ್ನು ಪ್ರಕರಣ ಸಂಬಂಧ ಈಗಾಗಲೇ ನಭಾ ಜೈಲು ಅಧೀಕ್ಷಕ, ಉಪ ಜೈಲು ಅಧೀಕ್ಷಕ ಹಾಗೂ ಇತರೆ ಜೈಲು ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಪರಾರಿಯಾಗಿರುವ ಉಗ್ರರ ಶೋಧಕ್ಕಾಗಿ ವಿಶೇಷ ತಂಡವನ್ನು ಪಂಜಾಬ್ ಸರ್ಕಾರ ರಚನೆ ಮಾಡಿದೆ.
ಇನ್ನು ಪ್ರಸ್ತುತ ಪರಾರಿಯಾಗಿರುವ ಖಲಿಸ್ತಾನ ಲಿಬರೇಷನ್ ಫೋರ್ಸ್ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂಗೆ ಪಾಕಿಸ್ತಾನದ ಐಎಸ್ ಐ ನ ನಿಕಟ ಸಂಪರ್ಕವಿದ್ದು, ದೇಶ, ವಿದೇಶಗಳಿಂದ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕ ಕಲ್ಪಿಸಿ ಅವರ ನೆರವಿನೊಂದಿಗೆ ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಹರ್ಮಿಂದರ್ ಸಿಂಗ್ ಮಿಂಟೂನನ್ನು 2014ರ ನವೆಂಬರ್ 7ರಂದು ಪಂಜಾಬ್ ಪೊಲೀಸರು ಮಿಂಟೂ ಮುಖ್ಯ ಸಹಾಯಕ ಗುರುಪ್ರೀತ್ ಸಿಂಗ್ ಯಾನೆ ಗೋಪಿ ಜೊತೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. 2013ರಲ್ಲಿ ಹಲವಾರು ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ಹೂಡಿದ್ದ ಮಿಂಟೂ, ಪಾಕಿಸ್ತಾನದಲ್ಲಿ ಇದ್ದುಕೊಂಡು ಕೆಎಲ್ಎಫ್ ಸಂಘಟನೆಯನ್ನು ಪ್ರಬಲಗೊಳಿಸುವಲ್ಲಿ ಸಕ್ರಿಯನಾಗಿದ್ದ. ಬಳಿಕ ಯುರೋಪಿನ ವಿವಿಧ ದೇಶಗಳಲ್ಲಿ ಸಂರ್ಪಸಿ ಬೇರೆ ಬೇರೆ ಭಯೋತ್ಪಾದಕ ಸಂಘಟನೆಗಳನ್ನು ಸಂಪರ್ಕಿಸಿ ಬೆಂಬಲ ಕ್ರೋಢೀಕರಿಸುವ ಯತ್ನ ನಡೆಸಿದ್ದ ಎಂದು ಹೇಳಲಾಗುತ್ತಿದೆ. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಈತನ ಬಂಧನವನ್ನು ಭಾರಿ ಯಶಸ್ಸು ಎಂದು ಪರಿಗಣಿಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ