
ನವದೆಹಲಿ: ಪಂಜಾಬ್'ನ ನಬಾ ಜೈಲಿನ ಮೇಲೆ ಶಸ್ತ್ರಾಸ್ತ್ರಧಾರಿಗಳು ದಾಳಿ ಮಾಡಿ ಉಗ್ರರನ್ನು ಬಂಧನ ಮುಕ್ತಗೊಳಿಸಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಗೃಹ ಸಚಿವಾಲಯ ಪಂಜಾಬ್ ಸರ್ಕಾರಕ್ಕೆ ಭಾನುವಾರ ಆದೇಶಿಸಿದೆ.
ನಬಾ ಜೈಲಿಗೆ ಸಾಕಷ್ಟು ಭದ್ರತೆಯನ್ನು ಒದಗಿಸಿದ್ದರೂ ಭದ್ರತೆ ನಡುವೆ ಶಸ್ತ್ರಾಸ್ತ್ರಧಾರಿಗಳು ಜೈಲಿನ ಒಳ ಪ್ರವೇಶ ಮಾಡಿರುವುದು ಸಾಕಷ್ಟು ಸಂಶಯಗಳನ್ನು ಹುಟ್ಟುಹಾಕಿದೆ. ಈ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯವು ಕೂಡಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಪೊಲೀಸರ ಸಮವಸ್ತ್ರ ಧರಿಸಿ ಬಂದಿದ್ದ 10 ಮಂದಿ ಶಸ್ತ್ರಾಸ್ತ್ರಧಾರಿಗಳು ಪಂಜಾಬ್ ನ ನಬಾ ಜೈಲಿನ ಒಳ ನುಗ್ಗಿದ್ದರು. ಈ ವೇಳೆ ನೂರು ಸುತ್ತು ಗುಂಡು ಹಾರಿಸಿ ಬಂಧನದಲ್ಲಿರಿಸಲಾಗಿದ್ದ ಖಾಲಿಸ್ತಾನ ವಿಮೋಚನಾ ದಳದ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಸೇರಿದಂತೆ ನಾಲ್ವರು ಉಗ್ರರನ್ನು ಬಂಧನ ಮುಕ್ತ ಗೊಳಿಸಿ ಸಿನಿಮೀಯ ರೀತಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದರು.
ಉಗ್ರರ ಪರಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪಂಜಾಬ್ ಸರ್ಕಾರ, ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಕರ್ತವ್ಯ ಲೋಪದ ಮೇರೆಗೆ ಗೃಹಖಾತೆಯನ್ನೂ ಹೊಂದಿರುವ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಬಾದಲ್ ಅವರು, ಜೈಲು ಅಧೀಕ್ಷಕ ಹಾಗೂ ಉಪ ಜೈಲು ಅಧೀಕ್ಷಕರನ್ನು ವಜಾ ಮಾಡಿ ಆದೇಶ ಹೊರಡಿಸಿದ್ದರು.
Advertisement