
ನವದೆಹಲಿ: ಹಣಕಾಸು ಸಚಿವನಾಗಿದ್ದರೆ, ನೋಟು ನಿಷೇಧ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರಕ್ಕೆ ಒಪ್ಪುತ್ತಿರಲಿಲ್ಲ, ವಿತ್ತ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಅವರು ಭಾನುವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸಾಹಿತ್ಯ ಹಬ್ಬ ಸಮಾರಂಭದಲ್ಲಿ ಮಾತನಾಡಿರುವ ಅವರು, ಒಂದು ವೇಳೆ ನಾನು ವಿತ್ತ ಸಚಿವನಾಗಿದ್ದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನ್ನ ಬಳಿ ಬಂದು ರು.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರಬೇಕೆಂದು ನಿರ್ಧರಿಸಿದ್ದೇನೆಂದು ಹೇಳಿದ್ದರೆ, ನೋಟಿನ ಮೇಲೆ ಹೇರಬೇಡಿ ಎಂದು ಸಲಹೆ ನೀಡುತ್ತಿದ್ದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸತ್ಯಾಂಶಗಳು ಹಾಗೂ ಅಂಕಿಅಂಶಗಳನ್ನು ನೀಡುತ್ತಿದ್ದೆ. ಒಂದು ವೇಳೆ ಮೋದಿಯವರು ನನ್ನ ಸಲಹೆಯನ್ನು ಪಡೆದುಕೊಳ್ಳದೆಯೇ ಇದು ನನ್ನ ನಿರ್ಧಾರ, ನಾನು ಜಾರಿಗೆ ತಂದೇ ತರುತ್ತೇನೆಂದು ಹೇಳಿದ್ದರೆ, ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೆ ಎಂದು ಹೇಳಿದ್ದಾರೆ.
ನೋಟು ನಿಷೇಧ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾಡಿರುವ ಅವರು, ನೋಟು ನಿಷೇಧದ ಮೂಲಕ ಕಪ್ಪುಹಣ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕಪ್ಪುಹಣ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ನೋಟು ನಿಷೇದ ಕುರಿತಂತೆ ಮೋದಿಯವರು ಸಂಪೂರ್ಣವಾಗಿ ಮಾಹಿತಿಯನ್ನು ನೀಡಿಲ್ಲ. ಮೋದಿಯವರ ನಿರ್ಧಾರ ಕುರಿತಂತೆ ಸ್ವತಃ ಮುಖ್ಯ ಆರ್ಥಿಕ ಸಲಹೆಗಾರರಿಗೆ ಸರಿಯಾದ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ.
Advertisement