
ನವದೆಹಲಿ: ಕಾಳಧನಿಕರು ತಮ್ಮ ಬಳಿ ಇರುವ ಕಪ್ಪುಹಣ ಬಿಳಿಯಾಗಿಸಲು ಕೇಂದ್ರ ಸರ್ಕಾರ ಮತ್ತೊಂದು ಅವಕಾಶ ನೀಡಿದ್ದು, ಈಗಲೇ ಕಪ್ಪುಹಣ ಘೋಷಣೆ ಮಾಡಿದರೆ ಶೇ.50ರಷ್ಟು ತೆರಿಗೆಯೊಂದಿಗೆ ಆಘೋಷಿತ ಮೊತ್ತ ಬಿಳಿಯಾಗಲಿದೆ.
ಕೇಂದ್ರ ಸರ್ಕಾರದ ಪ್ರಸ್ತಾವಿತ ನೂತನ ಮಸೂದೆಯಲ್ಲಿ ಕಪ್ಪುಹಣ ಹೊರಗೆಳೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ ಸ್ವಯಂ ಪ್ರೇರಿತವಾಗಿ ಕಪ್ಪುಹಣ ಅಥವಾ ಅಘೋಷಿತ ಹಣವನ್ನು ತೆರಿಗೆ ಇಲಾಖೆ ಎದುರು ಘೋಷಿಸಿಕೊಂಡರೆ ಶೇ.50 ತೆರಿಗೆ ಪಾವತಿಸಿ, ಉಳಿದ ಹಣವನ್ನು ಸಕ್ರಮಗೊಳಿಸಲು ಕೇಂದ್ರ ಸರ್ಕಾರ ಮಸೂದೆಯಲ್ಲಿ ಅವಕಾಶ ನೀಡಿದೆ. ಒಂದು ವೇಳೆ ಈ ಅವಧಿಯಲ್ಲೂ ಕಪ್ಪುಹಣ ಘೋಷಣೆ ಮಾಡದವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿಬಿದ್ದ ಕಾಳಧನಿಕರಿಗೆ ಶೇ.75ರಷ್ಟು ತೆರಿಗೆ ಮತ್ತು ಶೇ.10ರಷ್ಟು ಹಣವನ್ನು ದಂಡವಾಗಿ ವಿಧಿಸುವ ಕಠಿಣ ಕಾನೂನು ಜಾರಿಗೆ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಇನ್ನು ಸ್ವಯಂಘೋಷಿತ ಕಾಳಧನಿಕರಿಂದ ಬಂದ ತೆರಿಗೆ ಹಣದ ಪೈಕಿ ಶೇ.33ರಷ್ಟು ಹಣವನ್ನು ಬಡವರ ಕಲ್ಯಾಣ ಯೋಜನೆಗೆ ಬಳಕೆಕೊಳ್ಳಲಾಗುತ್ತದೆ. ಉಳಿದ ಶೇ.25ರಷ್ಟು ಹಣವನ್ನು ಆರ್ ಬಿಐ ನಿಗದಿ ಪಡಿಸಿದ ಯೋಜನೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೀಗೆ ಕಾಳಧನಿಕರಿಂದ ಸರ್ಕಾರದ ಬೊಕ್ಕಸ ಸೇರುವ ಹಣವನ್ನು ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರು, ದುರ್ಬಲರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿಗೆ ಮುಂದಾಗಿದೆ.
Advertisement