ಲಖನೌ: ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ನೋಟ್ ನಿಷೇಧಿಸುವ ಮೂಲಕ ಜನರ ಸಾಂವಿಧಾನಿಕ ಹಕ್ಕು ಕಿತ್ತುಕೊಂಡಿದ್ದಾರೆ ಎಂದು ಮಂಗಳವಾರ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯನ್ನು ಉತ್ತರ ಪ್ರದೇಶಕ್ಕೂ ವಿಸ್ತರಿಸಿರುವ ಮಮತಾ, ನರೇಂದ್ರ ಮೋದಿ ಅವರು ಬಿಜೆಪಿ ನಾಯಕ ಬ್ಯಾಂಕ್ ಖಾತೆಯ ವಿವರ ಕೇಳುವ ಮೊದಲು ತಮ್ಮ ಬ್ಯಾಂಕ್ ಖಾತೆಯ ವಿವರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಉತ್ತರ ಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಜಂಟಿಯಾಗಿ ನೋಟ್ ನಿಷೇಧದ ವಿರುದ್ಧ ಆಯೋಜಿಸಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ದೀದಿ, ಮೋದಿ ತುಗಲಕ್ ಮತ್ತು ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಅವರು ಜನಸಾಮಾನ್ಯರ ಸಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರ ನೋಟ್ ನಿಷೇಧ ನಿರ್ಧಾರವನ್ನು ಹಿಂಪಡೆಯುವರೆಗೂ ತಾವು ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಘೋಷಿಸಿದ್ದಾರೆ.