
ಜಮ್ಮು: ಸೇನಾ ಮುಖ್ಯಸ್ಥ ಜನರಲ್ ದಲ್ಬಿರ್ ಸಿಂಗ್ ಸುಹಾಗ್ ಅವರು ಬುಧವಾರ ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದ "16 ಕೋರ್' ಸೇನಾ ಶಿಬಿರಕ್ಕೆ ಭೇಟಿ ನೀಡಿ, ಏಳು ಸೇನಾ ಅಧಿಕಾರಿಗಳು ಹಾಗೂ ಓರ್ವ ಯೋಧನನ್ನು ಬಲಿ ಪಡೆದ ಉಗ್ರ ದಾಳಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಈಗಾಗಲೇ ಮೂವರು ಉಗ್ರರನ್ನು ಹತ್ಯೆ ಮಾಡಿರುವ ಸೇನೆ ಉಳಿದ ಉಗ್ರರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಿದೆ. ಇಂದು "16 ಕೋರ್' ಸೇನಾ ಶಿಬಿರಕ್ಕೆ ಭೇಟಿ ನೀಡಿದ ಸೇನಾ ಮುಖ್ಯಸ್ಥರಿಗೆ ಹಿರಿಯ ಕಮಾಂಡರ್ ಗಳು ಉಗ್ರ ದಾಳಿಯ ಬಗ್ಗೆ ಹಾಗೂ ಕೂಂಬಿಂಗ್ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ದಲ್ಬಿರ್ ಸಿಂಗ್ ಅವರು ಉಗ್ರ ದಾಳಿಯ ನಂತರದ ಭದ್ರತೆಯನ್ನು ಪರಿಶೀಲಿಸಿದ ಬಳಿಕ, ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದರು.
ಠಾಣ್‌ಕೋಟ್ ವಾಯುನೆಲೆ ಮತ್ತು ಉರಿ ಸೇನಾನೆಲೆ ಮೇಲೆ ನಡೆದ ದಾಳಿಯ ಬಳಿಕ ಉಗ್ರರು ಜಮ್ಮು- ಕಾಶ್ಮೀರದಲ್ಲಿ ಮತ್ತೂಮ್ಮೆ ಅಟ್ಟಹಾಸ ಮೆರೆದಿದ್ದು, ನಿನ್ನೆ ಪೊಲೀಸ್ ಸಮವಸ್ತ್ರದಲ್ಲಿ ಬಂದ ಉಗ್ರರು ಜಮ್ಮು ಹೊರವಲಯದ ನಗ್ರೋಟಾದಲ್ಲಿನ "16 ಕೋರ್' ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಸಹಿತ 7 ಮಂದಿ ಯೋಧರು ಹುತಾತ್ಮರಾಗಿದ್ದಾರೆ.
Advertisement