ನಗ್ರೋಟಾ ದಾಳಿ: ಮೋದಿ ಪ್ರತಿಕ್ರಿಯೆಗೆ ವಿಪಕ್ಷಗಳ ಪಟ್ಟು, ಉಭಯ ಸದನಗಳಲ್ಲಿ ಕಲಾಪ ಮುಂದೂಡಿಕೆ
ನವದೆಹಲಿ: ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಸ ಸುಸೂತ್ರವಾಗಿ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ. ಇಂದೂ ಕೂಡ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿರುದ್ಧ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದು, ಪರಿಣಾಮ ಉಭಯ ಸದನಗಳಲ್ಲಿ ಕಲಾಪವನ್ನು ಮುಂದೂಡಲಾಗಿದೆ.
ಚಳಿಗಾಲ ಅಧಿವೇಶನ ಆರಂಭವಾದಾಗಿನಿಂದಲೂ ನೋಟು ನಿಷೇಧ ಕುರಿತಂತೆ ಕೇಂದ್ರದ ವಿರುದ್ದ ತೀವ್ರ ಪ್ರತಿಭಟನೆಗಳನ್ನು ನಡೆಸಿಕೊಂಡು ಬಂದಿರುವ ವಿರೋಧ ಪಕ್ಷಗಳು ಇದೀಗ ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿ ಪ್ರಕರಣವಿಡಿದು ಉಭಯ ಸದನಗಳಲ್ಲಿ ಗದಲ್ಲವನ್ನುಂಟು ಮಾಡುತ್ತಿವೆ.
ಅಧಿವೇಶನ ಆರಂಭವಾಗುತ್ತಿದ್ದಂತೆ ನಗ್ರೋಟಾ ಉಗ್ರರ ದಾಳಿ ಪ್ರಕರಣವನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳು ದಾಳಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರತಿಕ್ರಿಯೆ ನೀಡಬೇಕೆಂದು ಪಟ್ಟು ಹಿಡಿದವು. ಇದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಂಪೂರ್ಣ ವರದಿ ಬರುವವರೆಗೂ ಕಾಯುವಂತೆ ತಿಳಿಸಿದರು.
ಈ ಉತ್ತರಕ್ಕೆ ಸಮಾಧಾನಗೊಳ್ಳದ ಪ್ರತಿಪಕ್ಷದ ನಾಯಕರು ಕಲಾಪ ಆರಂಭವಾದ ಕೇವಲ 11 ನಿಮಿಷಗಳಲ್ಲೇ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದ್ದವು. ತೀವ್ರ ಗದ್ದಲವುಂಟಾದ ಹಿನ್ನೆಲೆಯಲ್ಲಿ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ