
ಚಂಡೀಘಡ: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಪಂಜಾಬ್ ನ ನಭಾ ಕೇಂದ್ರೀಯ ಕಾರಾಗೃಹದಿಂದ ಉಗ್ರರು ಪರಾರಿಯಾದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಮಂಗಳವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ಉಗ್ರರು ಪರಾರಿಯಾದ ಬಳಿಕ ವಜಾಗೊಂಡಿದ್ದ ಜೈಲಿನ ಉಪ ಅಧೀಕ್ಷಕ ಸೇರಿದಂತೆ ಇತರೆ ಇಬ್ಬರು ಆರೋಪಿಗಳನ್ನು ಪಂಜಾಬ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಬಳಿಕ ಈ ಮೂವರು ಪರಾರಿಯಾಗಿದ್ದು, ಇವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು ಎಂದು ತಿಳಿದುಬಂದಿದೆ. ಉಗ್ರರು ಪರಾರಿಯಾಗಲು ಕುಮ್ಮಕ್ಕು ನೀಡಿದ ಆರೋಪದ ಮೇಲೆ ಉಪ ಜೈಲು ಆಧೀಕ್ಷಕರನ್ನು ಬಂಧಿಸಲಾಗಿದ್ದು, ಇಂತಹುದೇ ಆರೋಪ ಮತ್ತು ಉಗ್ರರಿಗೆ ನೆರವು ನೀಡಿದ ಆರೋಪದ ಮೇರೆಗೆ ಜೈಲಿನ ಸಮೀಪ ಸಿಹಿತಿನಿಸಿನ ಅಂಗಡಿ ಮಾಲೀಕನೋರ್ವನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಪಂಜಾಬ್ ಪೊಲೀಸರು ಒಟ್ಟು 29 ಮಂದಿಯ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ಜೈಲು ಉಪ ಅಧೀಕ್ಷಕ ಭೀಮ್ ಸಿಂಗ್, ಜೈಲು ವಾರ್ಡನ್ ಜಗ್ ಮೀತ್ ಸಿಂಗ್ ಹಾಗೂ ಸಿಹಿತಿನಿಸಿನ ಅಂಗಡಿ ಮಾಲೀಕ ತೇಜಿಂದರ್ ಶರ್ಮಾ ಎಂಬುವವರನ್ನು ಬಂಧಿಸಿದ್ದಾರೆ. ಈ ಪೈಕಿ ಉಪ ಜೈಲು ಅಧೀಕ್ಷಕ ಭೀಮ್ ಸಿಂಗ್ ಜೈಲಿನಿಂದ ಉಗ್ರರು ಪರಾರಿಯಾಗುವ ಒಂದು ದಿನ ಮುಂಚಿತವಾಗಿ ಜೈಲಿನಲ್ಲಿ ಉಗ್ರರನ್ನು ಭೇಟಿ ಮಾಡಿದ್ದ. ಈತನದ್ದೇ ಮೊಬೈಲ್ ನಿಂದ ಉಗ್ರರು ಯಾರಿಗೋ ಕರೆ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪರಾರಿಯಾದವರ ಪೈಕಿ ಮತ್ತಿಬ್ಬರ ಬಂಧನ
ಇದೇ ವೇಳೆ ನಭಾ ಜೈಲಿನಿಂದ ಪರಾರಿಯಾಗಿದ್ದ ಉಗ್ರರ ಪೈಕಿ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ರಾಜಸ್ತಾನದ ಗಂಗಾನಗರದಲ್ಲಿ ಅವಿತಿದ್ದ ಇಬ್ಬರು ಉಗ್ರರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement