ನವದೆಹಲಿ: ರು.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರಿರುವ ಕುರಿತಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆಗಳನ್ನು ನಡೆಸುತ್ತಿರುವುದರ ಬೆನ್ನಲ್ಲೇ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆನ್ನಿಗೆ ನಿಂತಿದ್ದು, ಮೋದಿಯವರ ನಿರ್ಧಾರ ಸ್ವಾಗತಾರ್ಹ ಎಂದು ಗುರುವಾರ ಹೇಳಿದ್ದಾರೆ.
ನೋಟು ನಿಷೇಧ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, 1970ರಲ್ಲಿ ಮೊರಾರ್ಜಿ ದೇಸಾಯಿ ಅವರು ಹಣಕಾಸು ಸಚಿವರಾಗಿದ್ದಾಗಲೂ ಈ ರೀತಿಯ ನಿರ್ಧಾರವನ್ನು ಕೈಗೊಂಡಿದ್ದರು. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಇಂತಹದ್ದೊಂದು ನಿರ್ಧಾರವನ್ನು ಕೈಗೊಂಡಿದ್ದಾರೆ. ನೋಟು ನಿಷೇಧ ಕುರಿತಂತೆ ಯಾವುದೇ ಪಕ್ಷಪಾತವನ್ನು ಮಾಡುವುದಿಲ್ಲ. ಮೋದಿಯವರ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಇದೇ ವೇಳೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ನೋಟು ನಿಷೇಧ ಕುರಿತಂತೆ ಗದ್ದಲವನ್ನುಂಟು ಮಾಡುತ್ತಿರುವುದರ ಬಗ್ಗೆ ಮಾತನಾಡಿರುವ ಅವರು, ನೋಟು ನಿಷೇಧ ಮಾಡುವುದಕ್ಕೂ ಮೊದಲು ಕೇಂದ್ರ ಪೂರ್ವ ತಯಾರಿಯನ್ನು ಮಾಡಿಕೊಂಡಿಲ್ಲ. ಕೇಂದ್ರದ ಈ ನಡೆಯಿಂದ ಸಾಮಾನ್ಯ ಜನರು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿಯೇ ಇರುತ್ತೆದ ಎಂದು ತಿಳಿಸಿದ್ದಾರೆ.
ನೋಟಿನ ಮೇಲಿನ ನಿಷೇಧ ನಿರ್ಧಾರನ್ನು ದಿಢೀರನೇ ತೆಗೆದುಕೊಳ್ಳಲಾಗಿದೆ. ಕೇಂದ್ರ ಈ ನಿರ್ಧಾರ ನಗರದ ಜನರ ಮೇಲಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶದ ಜನರ ಮೇಲೆ ಗಂಭೀರವಾಗ ಪರಿಣಾವನ್ನು ಬೀರಿದೆ. ರು.500 ಹಾಗೂ 1,000 ನೋಟುಗಳ ನಿಷೇಧದಿಂದಾಗಿ ರೈತರು ಹಾಗೂ ಹಾಲು ವ್ಯಾಪಾರಿಗಳಿಗೆ ಸರಿಯಾದ ಸಮಯಕ್ಕೆ ಹಣ ಸಿಗುತ್ತಿಲ್ಲ. ಬ್ಯಾಂಕುಗಳು ಹಾಗೂ ಎಟಿಎಂಗಳ ಎದುರು ಕ್ಯೂನಿಂತು ಜನರೂ ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ನೋಟು ನಿಷೇಧ ನಿರ್ಧಾರದಲ್ಲಿ ನಾನು ಯಾವುದೇ ಪಕ್ಷಪಾತವನ್ನು ಮಾಡುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆಂದು ಹೇಳಿದ್ದಾರೆ.
Advertisement