ಬಾರಾಮುಲ್ಲಾ ಉಗ್ರ ದಾಳಿ: ಓರ್ವ ಯೋಧ ಹುತಾತ್ಮ, 2 ಉಗ್ರರನ್ನು ಸದೆಬಡಿದ ಸೇನೆ

ಸೀಮಿತ ದಾಳಿ ಮೂಲಕ ಬಿಸಿ ಮುಟ್ಟಿಸಿದ್ದರೂ, ಈಗಲೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಭಾರತದ ವಿರುದ್ಧ ತನ್ನ ಉದ್ಧಟತನವನ್ನು ಮುಂದುವರೆಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಸೀಮಿತ ದಾಳಿ ಮೂಲಕ ಬಿಸಿ ಮುಟ್ಟಿಸಿದ್ದರೂ, ಈಗಲೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಭಾರತದ ವಿರುದ್ಧ ತನ್ನ ಉದ್ಧಟತನವನ್ನು ಮುಂದುವರೆಸಿದೆ. ಗಡಿಯಲ್ಲಿ ಸೇನೆ ಶಿಬಿರದ ಮೇಲೆ ಉಗ್ರರ ಗುಂಪೊಂದು ದಾಳಿ ನಡೆಸಿದೆ. ಪರಿಣಾಮ ದಾಳಿಯಲ್ಲಿ ಓರ್ವ ಬಿಎಸ್ಎಫ್ ಯೋಧ ಹುತಾತ್ಮರಾಗಿರುವುದಾಗಿ ಸೋಮವಾರ ತಿಳಿದುಬಂದಿದೆ.

ಕಳೆದ ರಾತ್ರಿ 10.30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ 46 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ನ್ನು ಗುರಿಯಾಗಿರಿಸಿಕೊಂಡು ಉಗ್ರರ ಗುಂಪೊಂದು ದಾಳಿ ನಡೆಸಿದೆ. ಶಿಬಿರದ ಮೇಲೆ ಉಗ್ರರು ಗ್ರೆನೇಡ್ ದಾಳಿಯನ್ನು ನಡೆಸಿದ್ದಾರೆ. ಪರಿಣಾಮ ಓರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಯೋಧರಿಗೆ ಗಂಭೀರವಾಗಿ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.

ಉಗ್ರರ ಗುಂಪು ದಾಳಿ ನಡೆಸುತ್ತಿದ್ದಂತೆ ಕೂಡಲೇ ಕಾರ್ಯಾಚರಣೆಗಿಳಿದ ಯೋಧರು, ಉಗ್ರರಿಗೆ ದಿಟ್ಟ ಉತ್ತರ ನೀಡಿದ್ದಾರೆ. ಇದರಂತೆ ಇಬ್ಬರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಇನ್ನೂ ನಾಲ್ವರು ಉಗ್ರರು ಅಡಗಿ ಕುಳಿತಿದ್ದು ಗುಂಡಿನ ದಾಳಿ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಕಟ್ಟಡದ ಸುತ್ತಲೂ ಇದೀಗ ಭಾರತೀಯ ಸೇನೆ ಸುತ್ತುವರೆದಿದ್ದು, ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದಾರೆ. ಈಗಲೂ ಸ್ಥಳದಲ್ಲಿ ಗುಂಡಿನ ಚಕಮಕಿಗಳ ಶಬ್ಧ ಕೇಳಿಬರುತ್ತಿರುವುದಾಗಿ ಹೇಳಲಾಗುತ್ತಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿ ಬಳಿಕ ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನ ಉಗ್ರರು ಸತತ ಯತ್ನಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಫರೀಫ್ ಅವರೂ ಕೂಡ ನೇರವಾಗಿ ಸೀಮಿತ ದಾಳಿಯನ್ನು ಖಂಡಿಸುತ್ತೇವೆ ಹಾಗೂ ಭಾರತಕ್ಕೆ ಪ್ರತ್ಯುತ್ತರ ನೀಡುತ್ತೇವೆಂದು ಹೇಳಿದ್ದರು. ಇದರ ಬೆನ್ನಲ್ಲೇ ಉಗ್ರರು ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿರುವುದು ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com