
ಬಾರಾಮುಲ್ಲಾ: ಭಾರತೀಯ ಸೇನೆ ಸೀಮಿತ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಬಾರಾಮುಲ್ಲಾದ ಸೇನಾ ಶಿಬಿರದ ಮೇಲೆ ದಾಳಿ ಮಾಡಲು ಬಂದಿದ್ದ ಉಗ್ರರು, ನಾಗರೀಕರನ್ನು ರಕ್ಷಾ ಕವಚವಾಗಿ ಬಳಸಿಕೊಂಡು ತಪ್ಪಿಸಿಕೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಹಿರಿಯ ಪೊಲೀಸ್ ಅಧೀಕ್ಷಕ ಇಮ್ತಿಯಾಜ್ ಹುಸೇನ್ ಅವರು, ಮೂರರಿಂದ ನಾಲ್ಕು ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದರು. ಉಗ್ರ ದಾಳಿಗೆ ಸೇನೆ ಹಾಗೂ ಬಿಎಸ್ಎಫ್ ಯೋಧರು ದಿಟ್ಟ ಉತ್ತರ ನೀಡಿದ್ದಾರೆ. ಹೀಗಾಗಿಯೇ ಉಗ್ರರು ಸೇನೆಯ ಶಿಬಿರದೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ, ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿ, ಇಬ್ಬರು ಯೋಧರಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಉಗ್ರರು ದಾಳಿ ನಡೆಸಿದ ಸ್ಥಳದಲ್ಲಿ ಜಿಪಿಎಸ್, ತುಂಡಾದ ವೈಯರ್ ಗಳು ಹಾಗೂ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ಉಗ್ರರು ಯಾವ ಉಗ್ರ ಸಂಘಟನೆಗೆ ಸೇರಿದವರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಶಿಬಿರದ ಸಮೀಪದಲ್ಲಿ ನಾಗರೀಕರ ಸಂಖ್ಯೆ ಹೆಚ್ಚಾಗಿದ್ದರಿಂದ, ಕೆಲ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ, ಉಗ್ರರಿಗೆ ಯೋಧರು ಸರಿಯಾದ ಪಾಠ ಕಲಿಸುತ್ತಿದ್ದರು. ಇನ್ನು ಸ್ಥಳದಲ್ಲಿ ಕತ್ತಲೆ ಇದ್ದರಿಂದ, ಜನರನ್ನೇ ರಕ್ಷಾ ಕವಚವಾಗಿ ಬಳಸಿಕೊಂಡ ಉಗ್ರರು ತಪ್ಪಿಸಿಕೊಂಡಿದ್ದಾರೆಂದು ಹುಸೇನ್ ಅವರು ಹೇಳಿದ್ದಾರೆ.
Advertisement