
ಅಮೃತ್ ಸರ: ಪಂಜಾಬ್ ನ ಅಮೃತಸರ ಬಳಿ ಶಂಕಿತ ಪಾಕಿಸ್ತಾನದ ಬೋಟ್ ಪತ್ತೆಯಾಗಿದ್ದು, ಬೋಟ್ ನಲ್ಲಿದ್ದ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಅಮೃತಸರದ ರಾವಿ ನದಿಯಲ್ಲಿ ಶಂಕಿತ ಪಾಕಿಸ್ತಾನ ಮೂಲದ ಖಾಲಿ ಬೋಟ್ ಪತ್ತೆಯಾಗಿದ್ದು, ಮುಂಜಾನೆ ಸುಮಾರು 5 ಗಂಟೆ ಸುಮಾರಿನಲ್ಲಿ ಗಡಿಯಲ್ಲಿ ಪಹರೆ ನಡೆಸುತ್ತಿದ್ದ ಬಿಎಸ್ ಎಫ್ ಯೋಧನೋರ್ವ ಬೋಟ್ ಅನ್ನು ಪತ್ತೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಸೇನಾಧಿಕಾರಿಗಳು ಬೋಟ್ ಅನ್ನು ಪರಿಶೀಲಿಸಿದ್ದು, ಬೋಟ್ ಖಾಲಿಯಾಗಿರುವುದು ತಿಳಿದುಬಂದಿದೆ. ಆದರೆ ಬೋಟ್ ನಲ್ಲಿ ಬಂದವರಾರು? ಹಾಗೂ ಎಲ್ಲಿಗೆ ಹೋದರು ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಇನ್ನು ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿ 7 ಉಗ್ರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿತ್ತು. ಈ ವೇಳೆ 40 ಉಗ್ರರು ಹಾಗೂ 8 ಮಂದಿ ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈಯ್ಯಲಾಗಿತ್ತು. ದಾಳಿ ಬಳಿಕ ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪಾಕಿಸ್ತಾನ ಸೇಡು ತೀರಿಸಿಕೊಳ್ಳುವುದಾಗಿ ಹೇಳಿತ್ತು. ಈ ಹೇಳಿಕೆ ಬೆನ್ನಲ್ಲೇ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನ ಅಖ್ನೂರ್, ರಜೌರಿ ಸೇರಿದಂತೆ ಹಲವು ಸೆಕ್ಟರ್ ಗಳಲ್ಲಿನ ಭಾರತೀಯ ಯೋಧರ ಮೇಲೆ ದಾಳಿ ನಡೆಸಿತ್ತು. ಅಲ್ಲದೇ ಪಾಕ್ ಮೂಲದ ಉಗ್ರರು ಬಾರಾಮುಲ್ಲಾ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಓರ್ವ ಯೋಧನನ್ನು ಕೊಂದು ಹಾಕಿದ್ದರು.
ಈ ಸರಣಿ ಘಟನೆಗಳ ಬೆನ್ನಲ್ಲೇ ಗಡಿ ರಾಜ್ಯ ಪಂಜಾಬ್ ನಲ್ಲಿ ಶಂಕಿತ ಬೋಟ್ ಪತ್ತೆಯಾಗಿದ್ದು, ಮತ್ತೆ ಉಗ್ರ ದಾಳಿ ಭೀತಿ ಎದುರಾಗಿದೆ. ಹೀಗಾಗಿ ಅಮೃತಸರ ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಸೇನೆ ಕಟ್ಟೆಚ್ಚರವಹಿಸಿದ್ದು, ತೀವ್ರ ಶೋಧ ನಡೆಸುತ್ತಿದೆ.
Advertisement