ರಾಹುಲ್ ‘ಖೂನ್ ಕಿ ದಲಾಲಿ’ಹೇಳಿಕೆ ಹಿಂದಿನ ಭಾವನೆ ಜನರಿಗೆ ಅರ್ಥವಾಗುತ್ತೆ: ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಖೂನ್ ಕಿ ದಲಾಲಿ’ಎಂದು ಟೀಕಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಖೂನ್ ಕಿ ದಲಾಲಿ’ಎಂದು ಟೀಕಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ವಾಗ್ದಾಳಿ ನಡೆಸಿದ ಬೆನ್ನಲ್ಲೇ ತನ್ನ ನಾಯಕನ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್, ಆಡಳಿತರೂಢ ಪಕ್ಷ ಭಾರತೀಯ ಸೇನೆ ಸೀಮಿತ ದಾಳಿಯಲ್ಲಿ ರಾಜಕೀಯ ಮಾಡುತ್ತಿದೆ ಎಂದು ಶುಕ್ರವಾರ ಆರೋಪಿಸಿದೆ.
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅವರು, ರಾಹುಲ್ ಗಾಂಧಿ ಅವರು ಈ ಮುಂಚೆ ಸೀಮಿತ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಎಂದರು.
ಇದೇ ವೇಳೆ ಪ್ರಧಾನಿ ರಕ್ತದ ದಲ್ಲಾಳಿ ಎಂಬ ರಾಹುಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಬಲ್, ನೀವು ಮೊದಲು ರಾಹುಲ್ ಗಾಂಧಿ ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಮೊದಲು ಅವರು ಸರ್ಕಾರದ ನಿರ್ಧಾರ ಮತ್ತು ಸೇನೆಯನ್ನು ಬೆಂಬಲಿಸುವುದಾಗಿ ಹೇಳಿದ್ದರು. ಆದರೆ ನಂತರ ಬಿಜೆಪಿಯವರು ಮೋದಿಯನ್ನು ರಾಮನಿಗೆ ಹೋಲಿಕೆ ಮಾಡಿ, ಸೇನೆಯ ದಾಳಿಯಲ್ಲೂ ರಾಜಕೀಯ ಮಾಡಲು ಆರಂಭಿಸಿದಾಗ ಅವರು ಈ ರೀತಿ ಹೇಳಿದ್ದಾರೆ ಎಂದರು.
ರಾಹುಲ್ ಗಾಂಧಿ ಅವರು ತಾವು ಏನು ಹೇಳಿದ್ದಾರೆ ಎಂಬುದು ಗೊತ್ತು ಮತ್ತು ಅವರ ವಿಚಾರ ಸ್ಪಷ್ಟವಾಗಿದೆ. ದೇಶದ ಜನತೆಗೆ ರಾಹುಲ್ ಹೇಳಿಕೆ ಹಿಂದಿನ ಭಾವನೆ ಅರ್ಥವಾಗುತ್ತೆ ಎಂದು ಕಾಂಗ್ರೆಸ್ ನಾಯಕ ಸಮರ್ಥಿಸಿಕೊಂಡಿದ್ದಾರೆ.
'ಈ ರೀತಿಯ ಪೋಸ್ಟರ್ ಗಳನ್ನು ಹಾಕುವುದನ್ನು ಮತ್ತು ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಿ. ಸೇನೆಯನ್ನು ಗೌರವಿಸಿ' ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ದಾಟಿ ದಾಳಿ ಮಾಡಿದೆ ಎಂಬ ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಬಲ್, 1965, 1971 ಹಾಗೂ 1998ರಲ್ಲಿ ಎಲ್ಒಸಿ ಕ್ರಾಸ್ ಮಾಡಿದ್ದು ಯಾರು?, ಆ ವೇಳೆ ಮೋದಿ, ಮನೋಹರ್ ಪರಿಕ್ಕರ್, ಅಮಿತ್ ಶಾ ಕ್ರಾಸ್ ಮಾಡಿದ್ರಾ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com