ರಾಹುಲ್ ಗಾಂಧಿಯನ್ನು ಪಕ್ಷದಿಂದ ವಜಾಗೊಳಿಸಿ: ಕಾಂಗ್ರೆಸ್ ಮುಖಂಡನಿಂದ ಸೋನಿಯಾ ಗಾಂಧಿಗೆ ಒತ್ತಾಯ

ರಕ್ತದ ದಲ್ಲಾಳಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕರೆಯುವ ಮೂಲಕ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ(ಸಂಗ್ರಹ ಚಿತ್ರ)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ(ಸಂಗ್ರಹ ಚಿತ್ರ)
ಭೋಪಾಲ್: ರಕ್ತದ ದಲ್ಲಾಳಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕರೆಯುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜಿಪಿ ನಾಯಕರಿಂದ ಮಾತ್ರವಲ್ಲದೆ ತಮ್ಮ ಪಕ್ಷದವರಿಂದಲೇ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ವಾಟ್ಸಾಪ್ ನಲ್ಲಿ ವಿಡಿಯೋ ಹರಿದಾಡುತ್ತಿದ್ದು, ಅದರಲ್ಲಿ ಬರ್ವಾನಿ ಜಿಲ್ಲೆಯ ಕಾಂಗ್ರೆಸ್ ನಾಯಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮನವಿ ಮಾಡಿ, ದಲ್ಲಾಳಿ ಹೇಳಿಕೆ ನೀಡಿದ್ದಕ್ಕೆ ರಾಹುಲ್ ಗಾಂಧಿಯವರನ್ನು ಪಕ್ಷದಿಂದ ಪದಚ್ಯುತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ತಿಂಗಳು ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ್ನು ಉತ್ತರ ಪ್ರದೇಶದಲ್ಲಿ ಕಿಸಾನ್ ಯಾತ್ರೆಯ ವೇಳೆ ಟೀಕಿಸಿದ್ದ ರಾಹುಲ್  ಗಾಂಧಿ ಪ್ರಧಾನಿ ಮೋದಿಯವರು ಭಾರತೀಯ ಸೈನಿಕರ ರಕ್ತದ ದಲ್ಲಾಳಿ ನಡೆಸುತ್ತಿದ್ದಾರೆ ಎಂದು ಆಪಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬರ್ವಾನಿ ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ 
ಶೈಲೇಶ್ ಚೌಬೆ ವಿಡಿಯೋವನ್ನು ರೆಕಾರ್ಡ್ ಮಾಡಿ ವಾಟ್ಸಾಪ್ ನಲ್ಲಿ ಬಿಟ್ಟಿದ್ದು ಅದು ವೈರಲ್ ಆಗಿದೆ. ಒಂದು ನಿಮಿಷ 26 ಸೆಕೆಂಡುಗಳ ವಿಡಿಯೋದಲ್ಲಿ ಚೌಬೆಯವರು, ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನಾಶವಾಗುವ ಮುನ್ನ ಅವರನ್ನು ಪಕ್ಷದಿಂದ ತೆಗೆದುಹಾಕಿ ಯಾವುದಾದರೂ ವ್ಯಾಪಾರ ನಡೆಸಲು ದಾರಿ ಮಾಡಿಕೊಡುವಂತೆ ಸೋನಿಯಾ ಗಾಂಧಿಯವರನ್ನು ಒತ್ತಾಯಿಸಿದ್ದಾರೆ ಎಂದು ಇಂಗ್ಲೀಷ್ ದೈನಿಕವೊಂದು ವರದಿ ಮಾಡಿದೆ.
''ನಾನು ಶೈಲೇಶ್ ಚೌಬೆ ಬರ್ವಾನಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿದ್ದು ರಕ್ತದ ದಲ್ಲಾಳಿ ಎಂದು ಹೇಳಿಕೆ ನೀಡಿರುವ ರಾಹುಲ್ ಗಾಂಧಿಯನ್ನು ಪಕ್ಷದಿಂದ ವಜಾ ಮಾಡಬೇಕು. 30 ದಿನಗಳ ಕಾಲ ಕಿಸಾನ್ ಯಾತ್ರೆ ಕೈಗೊಂಡು ರಾಹುಲ್ ಗಾಂಧಿಯವರು ಉತ್ತಮ ನಾಯಕತ್ವ ಕೌಶಲ್ಯವನ್ನು ತೋರಿಸಿಕೊಂಡಿದ್ದಾರೆ. ಆದರೆ ಯಾತ್ರೆಯ ಕೊನೆಯ ದಿನ ಮಾತ್ರ ಇಡೀ ದೇಶವೇ ಅವರನ್ನು ತಿರಸ್ಕರಿಸುವಂತಹ ಶಬ್ದ ಪ್ರಯೋಗಿಸಿದ್ದಾರೆ'' ಎಂದರು.
ರಾಹುಲ್ ಗಾಂಧಿಯವರು ಪಕ್ಷದ ಒಳಿತಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅವರು ರಾಜಕೀಯದಿಂದ ಕೆಳಗಿಳಿಯಬೇಕು. ಯಾವುದಾದರೂ ಉದ್ಯಮ ಸಂಸ್ಥೆಯನ್ನು ಅವರು ಆರಂಭಿಸುವುದು ಒಳ್ಳೆಯದು. ಕಾಂಗ್ರೆಸ್ ನ್ನು ಬಳಸುತ್ತಿರುವ ಬಿಜೆಪಿ ವಿರುದ್ಧ ಹೋರಾಡಲು ನಾವಿದ್ದೇವೆ. ಆದರೆ ಈ ವ್ಯಕ್ತಿ ನಮ್ಮನ್ನು ಎಲ್ಲಾ ಮೂಲಗಳಿಂದ ಸೋಲಿಸಲು ನೋಡುತ್ತಿದ್ದಾರೆ, ಅವರ ನಾಯಕತ್ವವನ್ನು ನಾವು ಒಪ್ಪಲು ಸಾಧ್ಯವಿಲ್ಲ ಅವರಿಗೆ ನಾಯಕತ್ವ ಏನೆಂದು ಗೊತ್ತಿಲ್ಲ. ಆದ್ದರಿಂದ ಅವರನ್ನು ವಜಾಗೊಳಿಸಲು ನಾನು ಒತ್ತಾಯಿಸುತ್ತೇನೆ ಎಂದು ಚೌಬೆ ವಿಡಿಯೋದಲ್ಲಿ ಹೇಳಿದ್ದಾರೆ.
ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಮಧ್ಯ ಪ್ರದೇಶ ವಿಧಾನಸಭೆ ಪ್ರತಿಪಕ್ಷ ನಾಯಕ ಬಾಲಾ ಬಚ್ಚನ್, ವಿಡಿಯೋವನ್ನು ತಿರುಚಿರಬಹುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com