
ಮುಂಬೈ: ಉರಿ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರಿಗಾಗಿ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಡೊಂದನ್ನು ಹಾಡಲಿದ್ದಾರೆ ಎಂಬ ವರದಿಗಳ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದು, ಈ ವರೆಗೂ ಅಂತಹ ಯೋಜನೆಗೆ ಸಹಿ ಹಾಕಿಲ್ಲ ಎಂದು ತಿಳಿಸಿದ್ದಾರೆ.
ಹುತಾತ್ಮ ಯೋಧರಿಗಾಗಿ ಹಾಡೊಂದನ್ನು ಹಾಡುವಂತೆ ಸಂಸದರೊಬ್ಬರು ಮನವಿ ಮಾಡಿದ್ದರು, ಆ ವಿಷಯ ಅಲ್ಲಿಗೆ ನಿಂತ್ತಿದ್ದು, ಹಾಡು ಹಾಡುವುದಕ್ಕೆ ಇನ್ನು ಸಹಿ ಹಾಕಿಲ್ಲ ಎಂದು ಬಿಗ್ ಬೀ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಿದ್ದ ಬಿಜೆಪಿ ನಾಯಕ ತರುಣ್ ವಿಜಯ್, ಹುತಾತ್ಮ ಯೋಧರಿಗಾಗಿ ಸಂಯೋಜಿಸಲಾಗಿರುವ ಹಾಡಿಗೆ ಧ್ವನಿ ನೀಡುವಂತೆ ಅಮಿತಾಬ್ ಬಚ್ಚನ್ ಅವರಲ್ಲಿ ಮನವಿ ಮಾಡಿದ್ದರು. ಅಮಿತಾಬ್ ಬಚ್ಚನ್ ಹಾಡಲಿದ್ದಾರೆ ಎಂಬ ಹಾಡನ್ನು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದಕ್ಕಾಗಿಯೇ ಸಂಯೋಜಿಸಲಾಗಿದೆ ಎಂಬ ವರದಿಗಳು ಪ್ರಕಟವಾಗಿತ್ತು.
ವರ್ಷದ ಪ್ರಾರಂಭದಲ್ಲಿ ನಡೆದ ವಿಶ್ವಕಪ್ ಟಿ-20 ಪಂದ್ಯದಲ್ಲಿ ಅಮಿತಾಬ್ ಬಚ್ಚನ್ ಅವರು ರಾಷ್ಟ್ರಗೀತೆ ಹಾಡುವ ಮೂಲಕ ಭಾರತ ಕ್ರಿಕೆಟ್ ತಂಡವನ್ನು ಉತ್ತೇಜಿಸಿದ್ದರು. ಈಗ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸಂಯೋಜನೆ ಮಾಡಲಾಗಿರುವ ಹಾಡಿಗೆ ಬಿಗ್ ಬಿ ಧ್ವನಿ ನೀಡಲಿದ್ದಾರೆ ಎಂಬ ವದಂತಿಗಳಿದ್ದವು.
Advertisement