ಮುಂಬೈ: ಮುಂಬೈನ ಪೂರ್ವ ಬಾಂದ್ರಾದಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಗುರುವಾರ ಕುಸಿದು ಬಿದ್ದಿದ್ದು, ಇಬ್ಬರು ಮಕ್ಕಳು ಸೇರಿದಂತೆ ಕಟ್ಟಡದ ಅವಶೇಷಗಳಡಿ ಸಿಲುಕಿ ಐವರು ಮೃತಪಟ್ಟಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಎರಡು ಆಂಬುಲೆನ್ಸ್ ಗಳು ಧಾವಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಅವಶೇಷಗಳಡಿ ಸಿಲುಕಿದ್ದ ಆರು ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
ಮೃತರನ್ನು ಆಯಿಶಾ ಅಕ್ಬರ್ ಖಾನ್(12), ಅಲಿ ನಿಸಾರ್ ಅಹ್ಮದ್ ಖಾನ್(3), ಒಸಮಾ ನಿಸಾರ್ ಖಾನ್(14) ಹಾಗೂ ಅಫಿಫಾ ಸದಬ್(1 ವರ್ಷ) ಎಂದು ಗುರುತಿಸಲಾಗಿದೆ.
ಮೊದಲ ಮಹಡಿಯಿಂದ ನಾಲ್ಕನೆ ಮಹಡಿಯವರೆಗೂ ಕಟ್ಟಡ ಸಂಪೂರ್ಣವಾಗಿ ಕುಸಿದಿದ್ದು, ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.