ಭಾರತೀಯ ಸೇನೆ ಮಾತಾಡಲ್ಲ, ಮಾಡಿ ತೋರಿಸುತ್ತೆ: ಪ್ರಧಾನಿ ಮೋದಿ

ಭಾರತೀಯ ಸೇನೆ ಕೆಲಸದ ಮೇಲೆ ನಂಬಿಕೆಯಿಟ್ಟಿದೆ, ಮಾತನಾಡುವುದರಲ್ಲಿ ಅಲ್ಲ ಎಂದು ಪ್ರಧಾನ ಮಂತ್ರಿ...
ಪ್ರಧಾನಿ ನರೇಂದ್ರ ಮೋದಿ ಭೋಪಾಲ್ ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಭೋಪಾಲ್ ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
Updated on: 
ಭೋಪಾಲ್: ಭಾರತೀಯ ಸೇನೆ ಕೆಲಸದ ಮೇಲೆ ನಂಬಿಕೆಯಿಟ್ಟಿದೆ, ಮಾತನಾಡುವುದರಲ್ಲಿ ಅಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತೀಯ ಸೇನೆಯ ಇತ್ತೀಚಿನ ಸೀಮಿತ ದಾಳಿಯನ್ನು ಉಲ್ಲೇಖಿಸಿ ಹೇಳಿದ್ದಾರೆ. 
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಹೊಸದಾಗಿ ನಿರ್ಮಿಸಿರುವ ಯುದ್ಧ ಸ್ಮಾರಕವಾದ ಶೌರ್ಯ ಸ್ಮಾರಕದ ಉದ್ಘಾಟನೆಗೆ ಮುನ್ನ ಲಾಲ್ ಪರೇಡ್ ಮೈದಾನದಲ್ಲಿ ಮಾಜಿ ಸೈನಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 
ನಮ್ಮ ಸೈನಿಕರ ಬಗ್ಗೆ ಮಾತನಾಡುವಾಗ ಹೆಚ್ಚಿನ ಸಂದರ್ಭಗಳಲ್ಲಿ ಅವರ ಸಮವಸ್ತ್ರ ಮತ್ತು ಶೌರ್ಯದ ಬಗ್ಗೆ ಮಾತನಾಡುತ್ತೇವೆ. ಆದರೆ ಅವರನ್ನು ಮಾನವೀಯತೆಗೆ ಉದಾಹರಣೆಯನ್ನಾಗಿಯೂ ನೋಡಬೇಕು. ಈ ಐತಿಹಾಸಿಕ ದಿನದಂದು ನಮ್ಮ ಧೈರ್ಯಶಾಲಿ ಸೈನಿಕರಿಗೆ ಗೌರವ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಪ್ರಧಾನಿ ಶೌರ್ಯ ಸಮ್ಮಾನ್ ಸಭಾವನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದರು.
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನೆರೆ ಬಂದಂತಹ ಸಂದರ್ಭದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ಭಾರತೀಯ ಸೈನಿಕರ ಸಹಾಯವನ್ನು ಅವರು ಸ್ಮರಿಸಿದರು. ಅಲ್ಲಿನ ಜನರಿಗೆ ಸಹಾಯ ಮಾಡುತ್ತಿದ್ದ ಸಂದರ್ಭದಲ್ಲಿ, ಇದೇ ಜನರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದು ಎಂದು ಸೈನಿಕರು ಭಾವಿಸಲಿಲ್ಲ ಎಂದು ಅವರ ಗುಣಗಾನ ಮಾಡಿದರು.
ವಿಶ್ವಸಂಸ್ಥೆಯ ಶಾಂತಿ ಕಾಪಾಡುವಿಕೆ ಪಡೆಯಲ್ಲಿ ಭಾರತ ಬಹುದೊಡ್ಡ ಕೊಡುಗೆ ನೀಡುತ್ತದೆ. ಯೆಮೆನ್ ನಲ್ಲಿ ರಕ್ಷಣಾ ಕಾರ್ಯದಲ್ಲಿ ನಮ್ಮ ದೇಶದ ಸೈನಿಕರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಅಲ್ಲಿ ರಕ್ಷಿಸಲ್ಪಟ್ಟ ಜನರು ಕೇವಲ ಭಾರತೀಯರು ಮಾತ್ರವಲ್ಲದೆ ಬೇರೆ ದೇಶದವರು ಕೂಡ ಇದ್ದರು. ಕೆಲವು ಪಾಕಿಸ್ತಾನಿಯರೂ ಕೂಡ ಇದ್ದರು ಎಂದು ಪ್ರಧಾನಿ ಹೇಳಿದರು.
ನಾವು ಭಾರತೀಯರು ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಎಚ್ಚರವಾಗಿರದಿದ್ದರು ಯೋಧರು ನಮ್ಮನ್ನು ಕ್ಷಮಿಸುವುದಿಲ್ಲ. ಸೈನಿಕರು ಹೆಚ್ಚು ಮಾತನಾಡದೆ ಅವರ ಶೌರ್ಯವನ್ನು ತೋರಿಸುವಂತೆ ನಮ್ಮ ರಕ್ಷಣಾ ಸಚಿವರು ಕೂಡ ಮಾತನಾಡುವುದಿಲ್ಲ ಎಂದರು.
ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಾಜಿ ಸೇನಾ ಯೋಧರ ಸಮಾನ ಶ್ರೇಣಿ, ಸಮಾನ ಪಿಂಚಣಿ ಬೇಡಿಕೆಯನ್ನು ತಮ್ಮ ಸರ್ಕಾರ ಈಡೇರಿಸಿದೆ ಎಂದು ಹೇಳಿದರು. 
ಇಲ್ಲಿಂದ ಪ್ರಧಾನಿ ಮೋದಿ ಅರೆರಾ ಹಿಲ್ಸ್ ಗೆ ಶೌರ್ಯ ಸ್ಮಾರಕವನ್ನು ಅನಾವರಣಗೊಳಿಸಲು ತೆರಳಿದರು. ಸ್ಮಾರಕವು ಸೈನಿಕರ ದೇಶ ಭಕ್ತಿಯ ಪಯಣವನ್ನು ಬಿಂಬಿಸುತ್ತದೆ. 
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಭೋಪಾಲ್ ನ ರೈಲ್ವೆ, ವಿಮಾನ, ಬಸ್ ನಿಲ್ದಾಣಗಳು, ಪ್ರಮುಖ ಮಾರುಕಟ್ಟೆ ಮತ್ತು ಸ್ಥಳಗಳ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದೊಳಗೆ ಪ್ರವೇಶಿಸುವ ವಾಹನಗಳನ್ನು ತಪಾಸಣೆ ಮಾಡಿ ಕಳುಹಿಸಲಾಗುತ್ತಿದೆ. 
ಪ್ರಧಾನಿಯವರ ಜೊತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೊದಲಾದವರಿದ್ದಾರೆ. ಇಲ್ಲಿಂದ ಪ್ರಧಾನಿ ಗೋವಾಕ್ಕೆ ನಾಳೆ ಆರಂಭವಾಗಲಿರುವ ಬ್ರಿಕ್ಸ್ ಶೃಂಗಸಭೆಗೆ ತೆರಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com