ಸಂಸದೀಯ ಸಮಿತಿಗೆ ಸೀಮಿತ ದಾಳಿ ಕುರಿತು ಮಾಹಿತಿ ನೀಡಿದ ಭಾರತೀಯ ಸೇನೆ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ದೇಶದ ರಾಜಕಾರಣಿಗಳೇ ಅಪಸ್ವರ ಎತ್ತಿರುವ ಬೆನ್ನಲ್ಲೇ ಶುಕ್ರವಾರ ದೆಹಲಿಯ ಹಿರಿಯ ಸೇನಾಧಿಕಾರಿಗಳು ಸಂಸದೀಯ ಸ್ಥಾಯಿ ಸಮಿತಿಗೆ ಸೀಮಿತ ದಾಳಿ ಕುರಿತಂತೆ ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ದೇಶದ ರಾಜಕಾರಣಿಗಳೇ ಅಪಸ್ವರ ಎತ್ತಿರುವ ಬೆನ್ನಲ್ಲೇ ಶುಕ್ರವಾರ  ದೆಹಲಿಯ ಹಿರಿಯ ಸೇನಾಧಿಕಾರಿಗಳು ಸಂಸದೀಯ ಸ್ಥಾಯಿ ಸಮಿತಿಗೆ ಸೀಮಿತ ದಾಳಿ ಕುರಿತಂತೆ ಮಾಹಿತಿ ನೀಡಿದ್ದಾರೆ.

ಸೇನೆ ನಡೆಸಿದ ಸೀಮಿತ ದಾಳಿಯ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ವಿರೋಧ ಪಕ್ಷಗಳಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿಯ ಸದಸ್ಯರಿಗೆ ಸೇನೆಯ  ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿನ್ನೆ ನಡೆದ ಈ ಉನ್ನತ ಮಟ್ಟದ ಸ್ಥಾಯಿ ಸಮಿತಿ ಸಭೆಯಲ್ಲಿ ಲೆ.ಜನರಲ್ ಬಿಪಿನ್ ರಾವತ್ ಅವರು ಸದಸ್ಯರಿಗೆ ಮಾಹಿತಿ ನೀಡಿದರು. ಸೆಪ್ಟೆಂಬರ್  29 ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಸೇನೆ ನಡೆಸಿದ್ದ ಸೀಮಿತ ದಾಳಿ ಕುರಿತು ವಿವರವಾದ ಮಾಹಿತಿ ನೀಡಲಾಯಿತಾದರೂ, ಸದಸ್ಯರಿಗೆ ಯಾವುದೇ ಪ್ರಶ್ನೆಗಳನ್ನು  ಕೇಳಲು ಅವಕಾಶ ನೀಡಿರಲಿಲ್ಲ. ಸಭೆಗೂ ಮೊದಲೇ ಯಾವುದೇ ಸದಸ್ಯರು ಪ್ರಶ್ನೆ ಕೇಳುವಂತಿಲ್ಲ ಎಂದು ಹೇಳಲಾಗಿತ್ತು.

ಹೀಗಿದ್ದೂ ಕಾಂಗ್ರೆಸ್​ ಪಕ್ಷದ ಮಧುಸೂದನ್ ಮಿಸ್ತ್ರಿ ಅವರು ಸೇನಾಧಿಕಾರಿಗಳಿಗೆ ಪ್ರಶ್ನೆ ಕೇಳಲು ಬಯಸಿದ್ದರು. ಆದರೆ ಮಿಸ್ತ್ರಿ ಅವರಿಗೆ ಪ್ರಶ್ನೆ ಕೇಳಲು ಸಮಿತಿಯ ಅಧ್ಯಕ್ಷ ನಿವೃತ್ತ ಮೇ.ಜನರಲ್  ಬಿ.ಸಿ. ಖಂಡೂರಿ ಅವಕಾಶ ನೀಡಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಸಣ್ಣ ವಾಗ್ವಾದ ಸಹ ನಡೆದಿತ್ತು ಎಂದು ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷದ ಅಂಬಿಕಾ ಸೋನಿ ಅವರು ಸಂಸದರ ಮೇಲೆ  ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದರು ಎಂದು ತಿಳಿದುಬಂದಿದೆ. ದೇಶದ ಭದ್ರತಾ ದೃಷ್ಟಿಯಿಂದ ಸೇನೆಯ ಸೂಕ್ಷ್ಮ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ  ಸಭೆಗೂ ಮೊದಲೇ ನಿರ್ಧರಿಸಲಾಗಿತ್ತು. ಹೀಗಾಗಿ ಸದಸ್ಯರಿಗೆ ಪ್ರಶ್ನೆ ಕೇಳುವ ಅವಕಾಶ ನೀಡಲಿಲ್ಲ ಎಂದು ಖಂಡೂರಿ ಹೇಳಿದರು.

ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿ ಸಭೆಯಲ್ಲಿ ಸೀಮಿತ ದಾಳಿಯ ಕುರಿತು ಮಾಹಿತಿ ಹಂಚಿಕೊಳ್ಳುವ ಅಜೆಂಡಾ ರೂಪಿಸಲಾಗಿತ್ತು. ನಂತರ ಅಜೆಂಡಾವರನ್ನು ಬದಲಿಸಿ ಮತ್ತೊಂದು ವಿಷಯದ  ಕುರಿತು ಸಭೆ ನಡೆಸಲು ತೀರ್ಮಾನಿಸಲಾಗಿತ್ತು.  ಕಾಂಗ್ರೆಸ್​ನ ಅಂಬಿಕಾ ಸೋನಿ ಮತ್ತು ಮಧುಸೂಧನ್ ಮಿಸ್ತ್ರಿ ಅಜೆಂಡಾ ಬದಲಿಸುವ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com