
ಥಾಣೆ: ಮುಂಬಯಿ ಕಾಲ್ ಸೆಂಟರ್ ಹಗರಣ ಸಂಬಂಧ ಪ್ರಕರಣದ ಮಾಸ್ಟರ್ ಮೈಂಡ್ ನ ಗುರು ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮುಂಬಯಿ ಮೂಲದ ಉದ್ಯಮಿ ಸಾಗರ್ ಥಕ್ಕರ್ ಅಲಿಯಾಸ್ ಶಾಗ್ಗಿಯ ಗುರು ಎನಿಸಿಕೊಂಡಿರುವ 33 ವರ್ಷದ ಜಗದೀಶ್ ಕಣ್ಣಾನಿಯನ್ನು ಕಳೆದ ರಾತ್ರಿ ಮುಂಬಯಿಯ ಸಬರ್ನ್ ಬೊರಿವಿಲಿಯಲ್ಲಿ ಬಂಧಿಸಿದ್ದಾರೆ.
ಕಣ್ಣಾನಿ ಬಳಿ ಥಕ್ಕರ್ ಕಳೆದ ಹಲವು ವರ್ಷಗಳಿಂದ ಮುಂಬಯಿ ಮತ್ತು ಅಹಮದಾಬಾದ್ ನಲ್ಲಿ ಕೆಲಸ ಮಾಡಿದ್ದನು, ತನ್ನ ಗುರುವಿನ ಬಳಿಯಿಂದ ಕೆಲವು ವ್ಯಾಪಾರದ ಟ್ರಿಕ್ಸ್ ಗಳನ್ನು ಪಡೆದಿದ್ದನು.
ಕಣ್ಣಾನಿ ಮೊದಲಿಗೆ ವಿದೇಶಿ ಮೂಲಗಳ ಬಿಪಿಓ ಗಳಲ್ಲಿ ಕೆಲಸ ಮಾಡುತ್ತಿದ್ದ. ಹೇಗೆ ವ್ಯಾಪಾರ ಬುದ್ದಿ ಉಪಯೋಗಿಸಿ ಬೇಗ ಹಣ ಸಂಗ್ರಹ ಮಾಡಬಹುದು ಎಂಬುದನ್ನು ಕಲಿತುಕೊಂಡ ಆತ, ನಕಲಿ ಕಾಲ್ ಸೆಂಟರ್ ಗಳಿಂದ ಅಮೆರಿಕ ಜನರಿಂದ ಹಣ ಸುಲಿಗೆ ಆರಂಭಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶಾದ್ಯಂತ ಇರುವ ಹಲವು ನಕಲಿ ಕಾಲ್ ಸೆಂಟರ್ ಗಳ ಹಿಂದಿನ ರೂವಾರಿ ಈತನೇ ಆಗಿದ್ದಾನೆ. ಈ ತಿಂಗಳ ಮೊದಲ ವಾರದಲ್ಲಿ ಮಿರಾ ರೋಡ್ ನಲ್ಲಿರುವ ಒಂದು ನಕಲಿ ಕಾಲ್ ಸೆಂಟರ್ ಅನ್ನು ಪೊಲೀಸರು ಸೀಜ್ ಮಾಡಿದ್ದರು. ಈತನೇ ಥಕ್ಕರ್ ಗೆ ನಕಲಿ ಕಾಲ್ ಸೆಂಟರ್ ವ್ಯವಹಾರ ಮಾಡಲು ಸಹಾಯ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.ಈಗ ಈತನ್ನು ಬಂಧಿಸಿದ್ದೇವೆ. ಈತನನ್ನು ವಿಚಾರಣೆಗೊಳಪಡಿಸಿ ಥಕ್ಕರ್ ಮತ್ತು ಉಳಿದ ಆತನ ಸಹಚರರು ಎಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.
ಭಾರತದ ಟೆಲಿಕಾಲರ್ ಗಳ ಮೂಲಕ ತಾವು ಅಮೆರಿಕದ ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡು ಅಮೆರಿಕದ ಪ್ರಜೆಗಳಿಗೆ ಮಿಲಿಯಾಂತರ ಡಾಲರ್ ಪಂಗನಾಮ ಹಾಕಿದ್ದಾರೆ.
Advertisement