
ನವದೆಹಲಿ: 2014ರ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ದೇಗುಲ ನಿರ್ಮಾಣ ವಿಚಾರವನ್ನು ಪ್ರಸ್ತಾಪ ಮಾಡಲಾಗಿದ್ದು, ನೀಡಿದ ಭರವಸೆಯಿಂದ ಯಾವುದೇ ಕಾರಣಕ್ಕೂ ಓಡಿಹೋಗುವುದಿಲ್ಲ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಬುಧವಾರ ಹೇಳಿದ್ದಾರೆ.
ರಾಮ ದೇಗುಲ ನಿರ್ಮಾಣ ವಿಚಾರ ಕುರಿತಂತೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, 2014ರ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ರಾಮ ದೇಗುಲ ವಿಚಾರ ಕೂಡ ಒಂದು ಭಾಗವಾಗಿದೆ. ಇದರಿಂದ ಓಡಿಹೋಗಲು ಹೇಗೆ ಸಾಧ್ಯ? ಭರವಸೆ ಈಡೇರಿಸಬೇಕಾದದ್ದು ನಮ್ಮ ಕರ್ತವ್ಯವಾಗಿದ್ದು, ದೇಗುಲವನ್ನು ನಿರ್ಮಾಣ ಮಾಡುತ್ತೇವೆಂದು ಹೇಳಿದ್ದಾರೆ.
ದೇಗುಲ ನಿರ್ಮಾಣ ವಿಚಾರವನ್ನು ಬಲವಂತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ರಾಮ ದೇಗುಲ ವಿಚಾರ ಹಲವು ವರ್ಷಗಳಿಂದಲೂ ಸುಪ್ರೀಂ ಅಂಗಳದಲ್ಲಿಯೇ ಇದೆ, ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಕ್ರಮಕೈಗೊಳ್ಳುವ ಅಗತ್ಯವಿದೆ.
ವಿವಾದಿತ ದೇಗುಲ ವಿಚಾರವನ್ನು ವಿಚಾರಣೆ ನಡೆಸಲು ಹಾಗೂ ಸಮಸ್ಯೆ ಬಗೆಹರಿಸಲು ಇದು ಸರಿಯಾದ ಸಮಯವಾಗಿದೆ. ವಿಚಾರಣೆಗೆ ಮುಸ್ಲಿಂ ಪಕ್ಷಗಳು ಕೂಡ ಒಪ್ಪಿಕೊಂಡಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿಯೊಂದು ದಾಖಲಿಸಲು ನಿರ್ಧರಿಸಿದ್ದೇನೆ. ಸರ್ಕಾರಕ್ಕೆ ನೋಟಿಸ್ ಜಾರಿ ಮಾಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.
Advertisement