ಅಪ್ಪಾ,ಇನ್ನೂ ಕಾಯಲು ಸಾಧ್ಯವಿಲ್ಲ: ತಂದೆಯ ವಿರುದ್ಧ ಬಂಡಾಯ ಸಾರಿದ ಅಖಿಲೇಶ್ ಯಾದವ್

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ತಂದೆ ಮುಲಾಯಂ ಸಿಂಗ್ ವಿರುದ್ಧ ಬಂಡಾಯ ಸಾರಿದ್ದಾರೆ....
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್

ನವದೆಹಲಿ: ಸಮಾಜವಾದಿ ಪಕ್ಷದ ಕೌಟುಂಬಿಕ ಕಲಹ ಬೀದಿಗೆ ಬಿದ್ದ ನಂತರ ಪಕ್ಷ ಹಲವು ಟರ್ನಿಂಗ್ ಮತ್ತು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ತಂದೆ ಮುಲಾಯಂ ಸಿಂಗ್ ವಿರುದ್ಧ ಬಂಡಾಯ ಸಾರಿದ್ದಾರೆ.

ತಮ್ಮ ತಂದೆ ಮುಲಾಯಂ ಸಿಂಗ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ನವೆಂಬರ್ 5 ರಂದು ಆಯೋಜಿಸಿರುವ ಪಕ್ಷದ ಬೆಳ್ಳಿ ಹಬ್ಬ ಸಮಾರಂಭಕ್ಕೆ ತಾವು ಹಾಜರಾಗಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಈ ಸಂಬಂಧ ತಮ್ಮ ತಂದೆಗೆ ಪತ್ರ ಬರೆದಿರುವ ಅಖಿಲೇಶ್, ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ಪಕ್ಷಗಳು ಈಗಾಗಲೇ ಚುನಾವಣಾ ಪ್ರಚಾರ ಕೈಗೊಂಡಿವೆ, ಇನ್ನೂ ನಾನು ಕಾಯಲು ಸಾಧ್ಯವಿಲ್ಲ, ನವೆಂಬರ್ 3 ರಿಂದ ಸಮಾಜವಾದಿ ವಿಕಾಸ ರಥ ಯಾತ್ರೆ ಆರಂಭಿಸುತ್ತಿದ್ದೇನೆ. ಅಕ್ಟೋಬರ್ 3 ರಂದೆ ಈ ಯಾತ್ರೆ ಆರಂಭವಾಗ ಬೇಕಿತ್ತು, ಆದರೆ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಜೊತೆಗಿನ ಕೌಟುಂಬಿಕ ಕಲಹದಿಂದ ಸಾಧ್ಯವಾಗಲಿಲ್ಲ. ಹೀಗಾಗಿ ನವೆಂಬರ್ 3 ರಿಂದ ಸಮಾಜವಾದಿ ವಿಕಾಸ ಯಾತ್ರೆಯ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನವೆಂಬರ್  5ರಂದು ಸಮಾಜವಾದಿ ಪಕ್ಷದ ಬೆಳ್ಳಿ ಹಬ್ಬ ನಡೆಯಲಿದ್ದು , ಆ ಕಾರ್ಯಕ್ರಮಕ್ಕೆ ತಾವು ಹಾಜರಾಗುವುದಿಲ್ಲವೆಂಬ ಪರೋಕ್ಷ ಸಂದೇಶವನ್ನು ಅಖಿಲೇಶ ತಮ್ಮ ತಂದೆಗೆ ರವಾನಿಸಿದ್ದಾರೆ.

ಶಿವಪಾಲ್ ಯಾದವ್ ಮತ್ತು ಅಖಿಲೇಶ್ ನಡುವಿನ ಬಿನ್ನಾಭಿಪ್ರಾಯವನ್ನು ಶಮನ ಮಾಡಲು ಮುಲಾಯಂ ಸಿಂಗ್ ಯಾದವ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಶಿವಪಾಲ್ಅ ಅಧಿಕಾರ ವಹಿಸಿಕೊಂಡ ಮೇಲೆ ಅಖಿಲೇಶ್ ಅಪ್ತರನ್ನು ಪಕ್ಷದಿಂದ ಉಚ್ಚಾಟಿಸಿರುವುದು ಉತ್ತರ ಪ್ರದೇಶ ಸಿಎಂ ಕಣ್ಣು ಕೆಂಪಾಗಿಸಿದೆ. ಈ ಹಿನ್ನೆಲೆಯಲ್ಲಿ ಅಖಿಲೇಶ್ ಸಮಾಜವಾದಿ ಪಕ್ಷದ ಬೆಳ್ಳಿ ಹಬ್ಬ ಸಮಾರಂಭಕ್ಕೆ ಗೈರಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com