
ನವದೆಹಲಿ: ಕೆಲ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವುದಕ್ಕೆ ಅಲ್ಲದೆ ರಾಜಕೀಯ ಮಾಡಲೆಂದೇ ಜೆಎನ್ ಯುಗೆ ಬರುತ್ತಾರೆಂದು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಗುರುವಾರ ಹೇಳಿದ್ದಾರೆ.
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯವೊಂದು ದೊಡ್ಡ ಸಂಸ್ಥೆಯಾಗಿದ್ದು, ಉಪ ಕುಲಪತಿಗಳು ಹಾಗೂ ಇನ್ನಿತರೆ ಅಧಿಕಾರಿಗಳನ್ನು ದೂಷಿಸುವುದು ತಪ್ಪು. ವಿದ್ಯಾರ್ಥಿಗಳಾದವರು ಓದುವುದರತ್ತ ಗಮನ ಹರಿಸಬೇಕೆಂದು ಹೇಳಿದ್ದಾರೆ.
ವಿದ್ಯಾರ್ಥಿ ನಾಪತ್ತೆ ಪ್ರಕರಣ ಕುರಿತಂತೆ ಈಗಾಗಲೇ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರ ಬಳಿ ಮಾತುಕತೆ ನಡೆಸಿದ್ದೇನೆಂದು ತಿಳಿಸಿದ್ದಾರೆ.
ದೇಶ ವಿರೋಧಿ ಘೋಷಣೆಯಿಂದಾಗಿ ಸಾಕಷ್ಟು ವಿವಾದಕ್ಕೀಡಾಗಿದ್ದ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಈಗಷ್ಟೇ ಕೊಂಚ ಸುಧಾರಿತ ವಾತಾವರಣಗಳು ಕಂಡುಬಂದಿದ್ದವು. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ಇದೀಗ ನಾಪತ್ತೆಯಾಗಿದ್ದು, ಮತ್ತೆ ಜೆಎನ್ ಯು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ನಜೀಬ್ ಅಹ್ಮಮದ್ ಎಂಬ ವಿದ್ಯಾರ್ಥಿ ಜೆಎನ್ ಯು ಕ್ಯಾಂಪಸ್ ನಿಂದ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು, ಕಳೆದ ಶನಿವಾರದಿಂದ ಆತ ಕಾಣುತ್ತಿಲ್ಲ. ಜೆಎನ್ ಯುನಲ್ಲಿ ಬಯೋಟೆಕ್ನಾಲಜಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ನಜೀಬ್ ಅಹ್ಮಮದ್ ಕಳೆದ 15 ದಿನಗಳ ಹಿಂದಷ್ಟೇ ವಿವಿಯ ಹಾಸ್ಟೆಲ್ ಗೆ ಬಂದಿದ್ದ.
ನಜೀಬ್ ಅಹ್ಮಮದ್ ನಾಪತ್ತೆಯ ಹಿಂದೆ ಎಬಿವಿಪಿ ಸಂಘಟನೆಯ ಕೈವಾಡವಿದೆ ಎಂಬ ಶಂಕೆಗಳು ವ್ಯಕ್ತವಾಗುತ್ತಿದ್ದು, ಮತ್ತೆ ಜೆಎನ್ ಯು ಆವರಣದಲ್ಲಿ ಪ್ರತಿಭಟನೆಗಳು ನಡೆಯಲಾರಂಭಿಸಿವೆ.
ವಿದ್ಯಾರ್ಥಿ ಸಮುದಾಯದ ಚುನಾವಣೆ ನಿಮಿತ್ತ ಕಳೆದ ಶುಕ್ರವಾರ ವಿವಿ ಆವರಣ ಮತ್ತು ಹಾಸ್ಟೆಲ್ ನಲ್ಲಿ ಪ್ರಚಾರ ನಡೆಸಲಾಗಿತ್ತು. ಈ ವೇಳೆ ವಿದ್ಯಾರ್ಥಿ ನಜೀಬ್ ಅಹ್ಮಮದ್ ಎಬಿವಿಪಿ ಸಂಘಟನೆಗೆ ಸೇರಿದ್ದ ಸದಸ್ಯನಿಗೆ ಕಪಾಳ ಮೋಕ್ಷ ಮಾಡಿದ್ದ. ಇದರಿಂದ ಕುಪಿತಗೊಂಡಿದ್ದ ಆತ ರಾತ್ರೋರಾತ್ರಿ ತನ್ನ ಇತರೆ ಸಂಗಡಿಗರನ್ನು ಕರೆತಂದು ನಜೀಬ್ ಅಹ್ಮಮದ್ ಮೇಲೆ ಹಲ್ಲೆ ನಡೆಸಿದ್ದ. ಈ ಘಟನೆ ಬಳಿಕ ನಜೀಬ್ ಅಹ್ಮಮದ್ ನಾಪತ್ತೆಯಾಗಿದ್ದಾನೆ ಎಂದು ನಜೀಬ್ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದಾರೆ.
Advertisement