ಮಹಿಳಾ ಐಎಎಸ್ ಅಧಿಕಾರಿಗೆ ಕಿರುಕುಳ, ದೆಹಲಿ ವ್ಯಕ್ತಿ ವಿರುದ್ಧ ಕೇಸ್ ದಾಖಲು

ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಹಾಗೂ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಕಾರ್ಯದರ್ಶಿಗೆ ಕಿರುಕುಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಹಾಗೂ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಕಾರ್ಯದರ್ಶಿಗೆ ಕಿರುಕುಳ ನೀಡಿದ ಮತ್ತು ಆಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ ವ್ಯಕ್ತಿಯೊಬ್ಬರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಮಹಿಳಾ ಅಧಿಕಾರಿ ದೆಹಲಿಯ ಚಾಣುಕ್ಯಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 2008ರಲ್ಲಿ ತಾನು ಬಿಹಾರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದಾಗಿನಿಂದಲೂ ಮನೋಜ್ ಕುಮಾರ್ ಎಂಬ ವ್ಯಕ್ತಿ ತನಗೆ ಕಿರುಕುಳ ನೀಡುತ್ತಿದ್ದು, 2014ರಲ್ಲಿ ರವಿಶಂಕರ್ ಕಾರ್ಯದರ್ಶಿಯಾಗಿ ದೆಹಲಿ ಬಂದ ನಂತರ ಆತನ ಕಿರುಕುಳ ಮತ್ತಷ್ಟು ಹೆಚ್ಚಿದೆ ಮತ್ತು ಅಶ್ಲೀಲ ಸಂದೇಶ, ಮೇಲ್, ಬೆದರಿಕೆ ಕರೆಗಳನ್ನು ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.
ಆರೋಪಿಯ ವಿರುದ್ಧ ಐಪಿಸಿ ಸೆಕ್ಸೆನ್ 354 ಮತ್ತು ಸೆಕ್ಸೆನ್ 506ರಡಿ ಕೇಸ್ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮನೋಜ್ ಕುಮಾರ್ ಮಹಿಳಾ ಅಧಿಕಾರಿ ಬಿಹಾರದಲ್ಲಿದ್ದಾಗಲೂ ಕಿರುಕುಳ ನೀಡಿದ್ದು, ಈ ಸಂಬಂಧ ಅಲ್ಲಿಯೂ ಕೇಸ್ ದಾಖಲಾಗಿದೆ. ಆದರೆ ದೆಹಲಿಗೆ ಬಂದ ನಂತರ ಕಿರುಕುಳ ಮತ್ತಷ್ಟು ಹೆಚ್ಚಾಗಿದ್ದು, ಅಧಿಕಾರಿಯ ಮೇಲೆ ಹಾಗೂ ಆಕೆಯ ಮೂರು ವರ್ಷದ ಮಗಳ ಮೇಲೂ ಆಸಿಡ್ ಹಾಕುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಇನ್ನು ಆರೋಪಿ ಸಹ ಮಹಿಳಾ ಅಧಿಕಾರಿಯ ವಿರುದ್ಧ ಕೇಸ್ ದಾಖಲಿಸಿದ್ದು, ತಾನು ಆಕೆಯ ಪತಿಯಾಗಿದ್ದು, ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿರುವುದಾಗಿ ಸಚಿವರ ಕಾರ್ಯದರ್ಶಿ ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com