
ಮುಂಬೈ: ಪಾಕಿಸ್ತಾನ ಕಲಾವಿದರೊಂದಿಗೆ ಕೆಲಸ ಮಾಡಿದರೆ ಭಾರತೀಯ ಸೇನೆಗೆ ರು.5 ಕೋಟಿ ಹಣವನ್ನು ನೀಡುವಂತೆ ಹೇಳಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಆಗ್ರಹದ ವಿರುದ್ಧ ನಿರ್ದೇಶಕ ಹಾಗ ನಿರ್ಮಾಪಕ ಅಶೋಕ್ ಪಂಡಿತ್ ಅವರು ಖಂಡಿಸಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು, ಪಾಕಿಸ್ತಾನ ಕಲಾವಿದರನ್ನು ತಮ್ಮ ಚಿತ್ರದಲ್ಲಿ ಬಳಸಿಕೊಂಡಿರುವ ನಿರ್ಮಾಪಕರನ್ನು ಸೇನೆಗೆ ರು.5 ಕೋಟಿ ಹಣ ನೀಡಿ ಎಂದು ಒತ್ತಡ ಹೇರುವುದು ಸರಿಯಲ್ಲ. ಹೃದಯಪೂರ್ವಕವಾಗಿ ಸೇನೆಗೆ ಹಣ ನೀಡಬೇಕೇ ವಿನಃ, ಬಲವಂತ ಮಾಡಿ, ಒತ್ತಡ ಹೇರಿ ಹಾಗೂ ಸುಲಿಗೆ ಮಾಡುವ ಮೂಲಕವಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ಕಲಾವಿದ ಫವಾದ್ ಖಾನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಎ ದಿಲ್ ಹೇ ಮುಷ್ಕಿಲ್ ಚಿತ್ರಕ್ಕೆ ಎಂಎನ್ಎಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಸಾಕಷ್ಟು ಹಗ್ಗಜಗ್ಗಾಟದ ಬಳಿಕ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಕೊನೆಗೂ ಎಂಎನ್ಎಸ್ ನಾಯಕರೊಂದಿಗೆ ಮಾತುಕತೆ ನಡೆಸಿತ್ತು.
ಮಾತುಕತೆ ಬಳಿಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರು, ಪಾಕಿಸ್ತಾನ ಕಲಾವಿದರೊಂದಿಗೆ ಕೆಲಸ ಮಾಡಿದ್ದಕ್ಕಾಗಿ ನಿರ್ಮಾಪಕರು ಹಾಗೂ ನಿರ್ದೇಶಕರು ಭಾರತೀಯ ಸೇನಾ ಕಲ್ಯಾಣ ಸಂಘಕ್ಕೆ ರು.5 ಕೋಟಿ ಹಣವನ್ನು ನೀಡಬೇಕೆಂದು ಹೇಳಿದ್ದರು. ಮುಂದೆ ಪಾಕಿಸ್ತಾನ ಕಲಾವಿದರನ್ನು ಹಾಕಿಕೊಂಡು ಚಿತ್ರ ಮಾಡುವವರಿಗೂ ಕೂಡ ಇದು ಅನ್ವಯವಾಗಲಿದೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಭಾರತೀಯ ಸೇನೆ ವಿರೋಧ ವ್ಯಕ್ತಪಡಿಸಿತ್ತು. ಸೇನಾ ವಿಚಾರದಲ್ಲಿ ರಾಜಕೀಯ ಮಾಡಬಾರದು. ಇತ್ತೀಚಿನ ಬೆಳವಣಿಗೆಗಳು ನಿಜಕ್ಕೂ ಬೇಸರತರಿಸಿದೆ. ಭಾರತೀಯ ಸೇನೆ ಕಲ್ಯಾಣ ನಿಧಿಗೆ ಯಾರೇ ಆದರೂ ವೈಯಕ್ತಿಕವಾಗಿ ಸ್ವಇಚ್ಛೆಯಿಂದ ಮತ್ತು ಪ್ರೀತಿಯಿಂದ ಹಣ ನೀಡಬೇಕೇ ಹೊರತು ಒಬ್ಬರನ್ನು ಬೆದರಿಸಿ ಅಥವಾ ಅವರ ಮೇಲೆ ಒತ್ತಡ ಹೇರಿ ನೀಡುವ ಹಣ ನಮಗೆ ಬೇಕಿಲ್ಲ ಹೇಳಿತ್ತು.
Advertisement