
ಜಮ್ಮು: ಗಡಿಯಲ್ಲಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರ ಯೋಧ ಗುರ್ನಾಮ್ ಸಿಂಗ್ ಅವರಿಗೆ ಭಾರತೀಯ ಸೇನಾಪಡೆ ಭಾನುವಾರ ಅಂತಿಮ ನಮನವನ್ನು ಸಲ್ಲಿಸಿದೆ.
ಅ.20ರಂದು ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಗುರ್ನಾಮ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿದ್ದರು. ಪಾಕಿಸ್ತಾನ ಸೇನೆಯ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡುವ ಮೂಲಕ ಪಾಕಿಸ್ತಾನದ ಓರ್ವ ಉಗ್ರ ಸೇರಿದಂತೆ 7 ಸೈನಿಕರನ್ನು ಹತ್ಯೆ ಮಾಡಿತ್ತು.
ಗಾಯಗೊಂಡಿದ್ದ ಗುರ್ನಾಮ್ ಸಿಂಗ್ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಹುತಾತ್ಮರಾಗಿದ್ದು, ಹುತಾತ್ಮರಾದ ಗುರ್ನಾಮ್ ಸಿಂಗ್ ಅವರಿಗೆ ಬಿಎಸ್ಎಫ್ ಪಡೆ ಇಂದು ಗೌರವ ಸಲ್ಲಿಸುವ ಮೂಲಕ ಅಂತಿಮ ನಮನವನ್ನು ಸಲ್ಲಿಸಿದೆ.
ಗುರ್ನಾಮ್ ಸಿಂಗ್ ಅವರ ತ್ಯಾಗ ಕುರಿತಂತೆ ಮಾತನಾಡಿರುವ ಬಿಎಸ್ಎಫ್ ಹೆಚ್ಚುವರಿ ಮಹಾ ನಿರ್ದೇಶಕ ಅರುಣ್ ಕುಮಾರ್ ಅವರು, ಗಡಿ ನುಸುಳುವುದರ ನಿಯಂತ್ರಣ ಕುರಿತಂತೆ ಗುರ್ನಾಮ್ ಸಿಂಗ್ ಅವರು ವೈಯಕ್ತಿಕ ಜವಾಬ್ದಾರಿಯನ್ನು ಹೊತ್ತು ಕರ್ತವ್ಯ ನಿರ್ವಹಿಸುತ್ತಿದ್ದರು.
ಅ.19 ಮತ್ತು 20 ರಂದು ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪಾಕಿಸ್ತಾನ ಸೇನೆ ಗಡಿ ನುಸುಳಲು ಯತ್ನ ನಡೆಸಿತ್ತು. ಈ ವೇಳೆ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ದಾಳಿ ವೇಳೆ ಗುರ್ನಾಮ್ ಸಿಂಗ್ ಅವರು ಗಾಯಗೊಂಡಿದ್ದರು. ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸುತ್ತಿದ್ದರಿಂದ ಸ್ಥಳದಿಂದ ಗುರ್ನಾಮ್ ಸಿಂಗ್ ಅವರನ್ನು ಸ್ಥಳಾಂತರ ಮಾಡುವುದು ಅತ್ಯಂತ ಕಷ್ಟಕರವಾಗಿತ್ತು. ಕೊನೆಗೂ ಅವರನ್ನು ಜಮ್ಮುವಿನ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಕೊಡಿಸಲಾಗುತ್ತಿತ್ತಾದರೂ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆಂದು ಹೇಳಿದ್ದಾರೆ.
ಗುರ್ನಾಮ್ ಸಿಂಗ್ ಅವರನ್ನು ಬದುಕಿಸಲು ವೈದ್ಯರು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಉತ್ತಮ ಚಿಕಿತ್ಸೆಯನ್ನೇ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ರವಾನಿಸುವ ಪ್ರಯತ್ನಗಳನ್ನೂ ಮಾಡಲಾಗಿತ್ತು. ಆದರೆ, ಅದಾವುದೂ ಫಲಕೊಡಲಿಲ್ಲ.
ಉರಿ ದಾಳಿ ನಂತರ ಗಡಿ ನುಸುಳಿವಿಕೆಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನೇ ನೀಡುತ್ತಿದೆ. ನಮ್ಮಲ್ಲಿರುವ ಒಬ್ಬ ವ್ಯಕ್ತಿಯನ್ನು ಮುಟ್ಟಲು ಪ್ರಯತ್ನ ನಡೆಸಿದರೂ ಅವರಿಗೆ ಯಾವ ರೀತಿಯಲ್ಲಿ ಉತ್ತರ ನೀಡುತ್ತೇವೆಂಬ ಸಂದೇಶವನ್ನು ಈಗಾಗಲೇ ನಾವು ರವಾನಿಸಿದ್ದೇವೆ ಎಂದು ತಿಳಿಸಿದ್ದಾರೆ.
Advertisement