
ಭೋಪಾಲ್: ಭೋಪಾಲ್ ಎನ್'ಕೌಂಟರ್ ಪ್ರಕರಣವನ್ನು ಸಿಬಿಐ ತನಿಖೆ ವಹಿಸುವಂತೆ ಕೋರಿ ಶಂಕಿತ ಉಗ್ರರ ಕುಟುಂಬಸ್ಥರು ಮಂಗಳವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಎನ್ ಕೌಂಟರ್ ನಲ್ಲಿ ಹತ್ಯೆಯಾದ ಸಿಮಿ ಉಗ್ರರ ಕುಟುಂಬಸ್ಥರು ನ್ಯಾಯ ಕೊಡಿಸುವಂತೆ ಕೋರಿ ನನ್ನ ಬಳಿ ಬಂದಿದ್ದರು. ಹೀಗಾಗಿ ಸಿಬಿಐ ತನಿಖೆ ಕೋರಿ ಹೈಕೋರ್ಟ್ ಮೊರೆ ಹೋಗಲಾಗುತ್ತಿದೆ ಎಂದು ವಕೀಲ ಪರ್ವೇಜ್ ಅಲಾಂ ಅವರು ಹೇಳಿದ್ದಾರೆ.
ಆರೋಪಿಗಳು 32 ಅಡಿಯ ಗಡಿ ಗೋಡೆಯನ್ನು ಹಾರಿದ್ದಾರೆಂದು ಹೇಳುತ್ತಿದ್ದಾರೆ. ಇದು ನಂಬಲು ಸಾಧ್ಯವೇ?...ಇದೊಂದು ನಕಲಿ ಎನ್ ಕೌಂಟರ್ ಆಗಿದ್ದು, ಆರೋಪಿಗಳು ಗುಂಡು ಹಾರಿಸಿರುವುದಕ್ಕೆ ಹಾಗೂ ಎನ್ ಕೌಂಟರ್ ಮಾಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಇದೊಂದು ನಕಲಿ ಎನ್'ಕೌಂಟರ್ ಆಗಿದ್ದು, ಕೊಲೆ ಪ್ರಕರಣವಾಗಿದೆ ಎಂದು ಪರ್ವೇಜ್ ಅವರು ಹೇಳಿದ್ದಾರೆ.
ಪ್ರಕರಣ ಸಂಬಂಧ ಈ ಹಿಂದೆ ಹೇಳಿಕೆ ನೀಡಿದ್ದ ಇನ್ಸ್ ಪೆಕ್ಟರ್ ಜನರಲ್ ಯೋಗೇಶ್ ಚೌಧರಿ ಅವರು, ಆರೋಪಿಗಳು ಹಲ್ಲುಜ್ಜುವ ಬ್ರಷ್ ನಿಂದ ಬೀಗವನ್ನು ತೆಗೆದು ಜೈಲಿನಿಂದ ಪರಾರಿಯಾಗಿದ್ದಾರೆಂದು ಹೇಳಿದ್ದರು.
ಭೋಪಾಲ್ ಕೇಂದ್ರೀ ಜೈಲಿಗೆ ಅತ್ಯಂತ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಹಾಗೂ ಐಎಸ್ಒ ಪ್ರಮಾಣಪತ್ರವನ್ನು ಹೊಂದಿರುವಂತಹ ಬೀಗಗಳನ್ನು ಹಾಕಿರಲಾಗಿತ್ತದೆ. ಇಂತಹ ಬೀಗಗಳನ್ನು ಹಲ್ಲುಜ್ಜುವ ಬ್ರಷ್ ಗಳಿಂದ ತೆಗದು ಸಾಧ್ಯವೇ? ಯಾವ ರೀತಿಯಲ್ಲಿ ಅಧಿಕಾರಿಗಳು ಸುಳ್ಳುನ್ನು ಹೇಳುತ್ತಿದ್ದಾರೆ.
ಆರೋಪಿಗಳ ಅಂತಿಮ ಸಂಸ್ಕಾರದ ಬಳಿಕ ನಮ್ಮ ಮೊದಲ ಹೆಜ್ಜೆಯನ್ನು ಹೈಕೋರ್ಟ್ ನಲ್ಲಿಡುತ್ತೇವೆ. ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ. ಈಗಾಗಲೇ ಆರೋಪಿಗಳ ಕುಟುಂಬಸ್ಥರು ಈಗಾಗಲೇ ಭೋಪಾಲ್ ತೆರಳಿದ್ದು, ಮೃತದೇಹಗಳನ್ನು ಶೀಘ್ರದಲ್ಲೇ ಪಡೆದುಕೊಳ್ಳಲಿದ್ದಾರೆಂದು ಪರ್ವೇಜ್ ತಿಳಿಸಿದ್ದಾರೆ.
Advertisement