ಪ್ರಧಾನಿ ಮೋದಿ ಆರ್'ಎಸ್ಎಸ್ ಪ್ರಚಾರಕ: ದಿಗ್ವಿಜಯ್ ಸಿಂಗ್

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಕಿಡಿಕಾರಿದ್ದು, ಮೋದಿಯವರು ಆರ್'ಎಸ್ಎಸ್ ಸಂಘಟನೆ ಪ್ರಚಾರಕರಾಗಿದ್ದಾರೆಂದು...
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್

ವಿಜಯವಾಡ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಕಿಡಿಕಾರಿದ್ದು, ಮೋದಿಯವರು ಆರ್'ಎಸ್ಎಸ್ ಸಂಘಟನೆ ಪ್ರಚಾರಕರಾಗಿದ್ದಾರೆಂದು ಮಂಗಳವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ತಮ್ಮದು ಜಾತ್ಯಾತೀಯ ರಾಜಕೀಯ ಪಕ್ಷವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೋರ್ಪಡಿಸುತ್ತಿದ್ದಾರೆ. ಆದರೆ, ಮೋದಿಯವರು ನಿಜವಾದ ಆರ್'ಎಸ್ಎಸ್ ಪ್ರಚಾರಕಾರಿದ್ದು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆಯಾದ ನಂತರ ಆರ್'ಎಸ್ಎಸ್ ಮೇಲೆ ನಿಷೇಧ ಹೇರಿದ್ದರು ಎಂಬುದನ್ನು ಮೋದಿಯವರು ಮರೆಯಬಾರದು ಎಂದು ಹೇಳಿದ್ದಾರೆ,

ಗಾಂಧೀಜಿಯವರನ್ನು ಹಾಗೂ ಗಾಂಧೀಜಿಯವರ ತತ್ವವನ್ನು ಪಾಲಿಸುತ್ತಿದ್ದೇವೆಂದು ಹೇಳುವ ಮೂಲಕ ಬಿಜೆಪಿ ಜನರ ದಿಕ್ಕನ್ನು ತಪ್ಪಿಸುತ್ತಿದೆ. ವಲ್ಲಭಭಾಯಿ ಪಟೇಲರು ಆರ್'ಎಸ್ಎಸ್ ಸಂಘಟನೆಯ ನಾಯಕರಾಗಿದ್ದರು ಎಂಬಂತೆ ಬಿಜೆಪಿ ವರ್ತಿಸುತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲರು ಅಂದಿನ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆಯಾದ ನಂತರ ಆರ್'ಎಸ್ಎಸ್ ಸಂಘಟನೆ ಮೇಲೆ ನಿಷೇಧ ಹೇರಿದ್ದರು ಎಂಬುದನ್ನು ಬಿಜೆಪಿ ಮರೆಯಬಾರದು.

ಆರ್'ಎಸ್ಎಸ್ ಯಾವಾಗಲೂ ಮಹಾತ್ಮ ಗಾಂಧೀಜಿ ಹಾಗೂ ಪಂಡಿತ್ ಜವಾಹರ್ ಲಾಲ್ ನೆಹರು ಅವರ ವಿರುದ್ಧವೇ ಇತ್ತು. ಆದರೆ, ಇಂದು ಬಿಜೆಪಿ ತಮ್ಮದು ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಪಕ್ಷವಾಗಿದೆ ಎಂಬಂತೆ ಬಿಂಬಿಸಿ ಜನರ ದಿಕ್ಕನ್ನು ತಪ್ಪಿಸುತ್ತಿದೆ. ಆರ್'ಎಸ್ಎಸ್ ಕಾರ್ಯಕರ್ತರು ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ್ದರು ಎಂಬ ರಾಹುಲ್ ಗಾಂಧಿಯವರ ಹೇಳಿಕೆ ಸರಿಯಾಗಿಯೇ ಇದೆ. ಈ ಹೇಳಿಕೆಯನ್ನು ಆರ್'ಎಸ್ಎಸ್ ಒಪ್ಪಿಕೊಳ್ಳುತ್ತದೆಯೇ, ಇಲ್ಲವೋ ಎಂಬುದು ನಮಗೆ ಬೇಕಿಲ್ಲ.

ತಮ್ಮ ಕುಟುಂಬದ ಸದಸ್ಯರೆಲ್ಲರೂ ಆರ್'ಎಸ್ಎಸ್ ಸಂಘಟನೆಯ ಭಾಗಿವಾಗಿದ್ದೆವು ಎಂಬುದನ್ನು ಸ್ವತಃ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯವರೇ ಒಪ್ಪಿಕೊಂಡಿದ್ದರು. ಹಿಂಸಾಚಾರ ಹಾಗೂ ದ್ವೇಷದ ವಿರುದ್ಧ ಕಾಂಗ್ರೆಸ್ ಇತ್ತು. ಪಟೇಲರನ್ನು ಪೂಜಿಸುವ ಮೊದಲು ಬಿಜೆಪಿಯವರು ಗುರು ಗೋಲ್ವಾಲ್ಕರ್ ಮತ್ತು ಡಾ.ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರನ್ನು ಒಪ್ಪಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ದೊಡ್ಡದಾಗಿಯ ಸ್ಥಾಪಿಸುತ್ತೇವೆಂದು ಬಿಜೆಪಿ ಹೇಳುತ್ತಿದ್ದರೆ, ಅದಕ್ಕೆ ನಮ್ಮ ಒಪ್ಪಿಗೆ ಹಾಗೂ ಸಂತೋಷವಿದೆ. ಆದರೆ, ಗುರು ಗೋಲ್ವಾಲ್ಕರ್ ಅವರ ಪ್ರತಿಮೆಯನ್ನು ಯಾವ ಕಾರಣಕ್ಕೆ ಸ್ಥಾಪಿಸುತ್ತಿಲ್ಲ ಎಂಬುದನ್ನು ಬಿಜೆಪಿಯವರನ್ನು ಕೇಳಲು ಇಚ್ಚಿಸುತ್ತೇನೆ. ಗುರು ಗೋಲ್ವಾಲ್ಕರ್ ಅವರನ್ನು ತಮ್ಮ ನಾಯಕರಾಗಿ ಏಕೆ ಬಿಜೆಪಿ ಒಪ್ಪಿಕೊಳ್ಳುತ್ತಿಲ್ಲ. ಡಾ.ಹೆಡ್ಗೆವಾರ್ ಅವರನ್ನು ಆರ್'ಎಸ್ಎಸ್ ಸ್ಥಾಪಕನೆಂದು ಒಪ್ಪಿಕೊಳ್ಳಲು ಏಕೆ ಹಿಂಜರಿಯುತ್ತಿದ್ದಾರೆ? ಸತ್ಯಗಳನ್ನು ಕೊಳ್ಳಲು ಬಿಜೆಪಿಯವರು ಮುಂದೆ ಬರಬೇಕಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಾಜಪೇಯಿ ಹಾಗೂ ಮೋದಿಯವರ ಹೋಲಿಕೆಗೆ ಕಿಡಿಕಾರಿರುವ ಅವರು, ಅಟಲ್ ಬಿಹಾರಿ ವಾಜಪೇಯಿಯವರು ಎಂದಿಗೂ ಆರ್'ಎಸ್ಎಸ್ ಪ್ರಚಾರಕರಾಗಿರಲಿಲ್ಲ. ವಾಜಪೇಯಿಯವರು ಆಧುನಿಕ ಹಾಗೂ ಉದಾರತನವನ್ನು ಹೊಂದಿದ್ದ ನಾಯಕರಾಗಿದ್ದರು. ಅಲ್ಲದೆ, ರಾಜ ಧರ್ಮವನ್ನು ನಂಬಿದ ವ್ಯಕ್ತಿಯಾಗಿದ್ದರು. ಸಾಮಾಜಿಕ ನ್ಯಾಯದ ಮೇಲೆ ನಂಬಿಕೆಯಿಟ್ಟಿದ್ದರು. ಈ ಹಿಂದೆ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ವಾಜಪೇಯಿಯವರು ಮೋದಿಯವರಿಗೆ ಒಂದು ಸಲಹೆಯನ್ನು ನೀಡಿದ್ದರು. ನೀವು ರಾಜಧರ್ಮವನ್ನು ನಿಭಾಯಿಸಬೇಕೆಂದು ಹೇಳಿದ್ದರು.

ವಾಜಪೇಯಿಯವರಿಗೆ ಸ್ವಲ್ಪ ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೋಲಿಕೆಯಾಗುವುದಿಲ್ಲ. ನ್ಯಾಯದ ಮೇಲೆ ನಾವು ನಂಬಿಕೆಯನ್ನು ಇಡುತ್ತೇವೆ. ಆರ್'ಎಸ್ಎಸ್ ಸಂಘಟನೆಯ ಕೈಗೊಂಬೆಗಳ ಮೇಲಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com