ದೇಶದ ಇಂಜಿನಿಯರಿಂಗ್ ಕಾಲೇಜ್ ಗಳಿಂದ ಕಳಪೆ ಗುಣಮಟ್ಟದ ಇಂಜಿನಿಯರ್ ಗಳ ತಯಾರಿ: ಶ್ರೀಧರನ್

ಇಂಜಿನಿಯರಿಂಗ್ ಕಾಲೇಜುಗಳು ಕಳಪೆ ಗುಣಮಟ್ಟದ ಇಂಜಿನಿಯರ್ ಗಳನ್ನು ತಯಾರು ಮಾಡುತ್ತಿವೆ ಎಂದು ಭಾರತೀಯ ಇಂಜಿನಿಯರಿಂಗ್ ಸೇವೆಯ (ಐಇಎಸ್) ನಿವೃತ್ತ ಅಧಿಕಾರಿ ಇ. ಶ್ರೀಧರನ್ ಹೇಳಿದ್ದಾರೆ.

ಅಹಮದಾಬಾದ್: ಒಂದೆಡೆ ಅತ್ಯುತ್ತಮ ಗುಣಮಟ್ಟ ಹೊಂದಿರುವ ಐಐಟಿಯನ್ ಗಳು ಉದ್ಯೋಗ, ಉನ್ನತ ಶಿಕ್ಷಣವನ್ನು ಅರಸಿ ವಿದೇಶಗಳಿಗೆ ತೆರಳುತ್ತಿದ್ದರೆ, ಇಂಜಿನಿಯರಿಂಗ್ ಕಾಲೇಜುಗಳು ಕಳಪೆ ಗುಣಮಟ್ಟದ ಇಂಜಿನಿಯರ್ ಗಳನ್ನು ತಯಾರು ಮಾಡುತ್ತಿವೆ ಎಂದು ಭಾರತೀಯ ಇಂಜಿನಿಯರಿಂಗ್ ಸೇವೆಯ (ಐಇಎಸ್) ನಿವೃತ್ತ ಅಧಿಕಾರಿ ಇ. ಶ್ರೀಧರನ್ ಹೇಳಿದ್ದಾರೆ.
ಅಹಮದಾಬಾದ್ ನಲ್ಲಿ ಯುಎನ್ ಮಹಿದಾ ಮೆಮೋರಿಯಲ್ ಲೆಕ್ಚರ್  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಧರನ್, ಪ್ರಧಾನಿ ನರೇಂದ್ರ ಮೋದಿ ವಿವಿಧ ಮೂಲಸೌಕರ್ಯ ಅಭಿವೃದ್ಧಿಗಾಗಿ 5 ಟ್ರಿಲಿಯನ್ ಡಾಲರ್ ನ ಗುರಿ ಹೊಂದಿದ್ದಾರೆ. ಈ ಬೃಹತ್ ವೆಚ್ಚದ ಯೋಜನೆಗಳನ್ನು ನಿರ್ವಹಿಸಬೇಕಾದರೆ ಇಂಜಿನಿಯರ್ ಗಳು ಹೊಸ ದೃಷ್ಟಿಕೋನ, ಗುಣಮಟ್ಟ, ಉದ್ದೇಶವನ್ನು ಕಂಡುಕೊಳ್ಳಬೇಕು ಎಂದು ಶ್ರೀಧರನ್ ಇಂಜಿನಿಯರ್ ಗಳಿಗೆ ಕರೆ ನೀಡಿದ್ದಾರೆ.

ನಮ್ಮ ದೇಶದಲ್ಲಿ ಇಂಜಿನಿಯರ್ ಗಳು ವೇಗವಾಗಿ ಅಪ್ ಡೇಟ್ ಆಗುತ್ತಿಲ್ಲ. ಅಪ್ ಡೇಟ್ ಆಗಲು ನಾವು ಇಂಜಿನಿಯರ್ ಗಳು ಸಾಕಷ್ಟು ಶ್ರಮ ವಹಿಸುತ್ತಿಲ್ಲ, ಇಂಜಿನಿಯರಿಂಗ್ ಕಾಲೇಜ್ ಗಳು ಹಾಗೂ ಸಂಸ್ಥೆಗಳು ಕಳಪೆ ಗುಣಮಟ್ಟದ ಇಂಜಿನಿಯರ್ ಗಳನ್ನು ತಯಾರು ಮಾಡುತ್ತಿವೆ ಎಂದು ಶ್ರೀಧರನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂಜಿನಿಯರ್ ಗಳ ಗುಣಮಟ್ಟದ ಬಗ್ಗೆ ಮಾತನಾಡುತ್ತಾ, ನಿಯತಕಾಲಿಕೆಯೊಂದರ ಸಮೀಕ್ಷೆಯನ್ನು ಉದಾಹರಿಸಿರುವ ಶ್ರೀಧರನ್, 300 ಕಾಲೇಜುಗಳಲ್ಲಿ ನಡೆಸಿರುವ ಸಮೀಕ್ಷೆ ಪೈಕಿ ಶೇ.29 ರಷ್ಟು ಇಂಜಿನಿಯರ್ ಗಳು ಮಾತ್ರವೇ ಉದ್ಯೋಗಕ್ಕೆ ಅರ್ಹರಾಗಿದ್ದಾರೆ. ಇನ್ನು ಶೇ.30 ರಷ್ಟು ಇಂಜಿನಿಯರ್ ಗಳು ಉನ್ನತ ಮಟ್ಟದ ಅಧ್ಯಯನ ನಂತರ ಉದ್ಯೋಗಕ್ಕೆ ಅರ್ಹರಾಗಿದ್ದಾರೆ, ಆದರೆ ಶೇ.48 ರಷ್ಟು ಇಂಜಿನಿಯರ್ ಗಳು ಉದ್ಯೋಗಕ್ಕೆ ಅರ್ಹರಲ್ಲ ಇದು  ನಮ್ಮ ಶಿಕ್ಷಣದ ಗುಣಮಟ್ಟವನ್ನು ತಿಳಿಸುತ್ತದೆ. ಇಂಜಿನಿಯರಿಂಗ್ ನಲ್ಲಿ ಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಆ ವಿಷಯದಲ್ಲಿ ಪರಿಣತಿ ಪಡೆಯಬೇಕಾಗುತ್ತದೆ, ಪ್ರಾಯೋಗಿಕ ಆಧಾರಿತ ಜ್ಞಾನವನ್ನು ಇಂಜಿನಿಯರ್ ಗಳಿಗೆ ನೀಡಬೇಕಾಗುತ್ತದೆ ಎಂದು ಶ್ರೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಅತ್ಯುನ್ನತ ಇಂಜಿನಿಯರ್ ಗಳು ಐಐಟಿ- ಎನ್ಐಟಿ ಗಳಿಂದ ಹೊರಬರುತ್ತಿದ್ದಾರೆ. ಆದರೆ ಅವರೆಲ್ಲರೂ  ಉನ್ನತ ಶಿಕ್ಷಣ- ಉದ್ಯೋಗವನ್ನು ಅರಸಿ ವಿದೇಶಕ್ಕೆ ತೆರಳುತ್ತಿದ್ದಾರೆ ಎಂದಿರುವ ಶ್ರೀಧರನ್, ಈಗಿನ ಇಂಜಿನಿಯರ್ ಗಳು ನಿಗದಿತ ಸಮಯ ಹಾಗೂ ಅಂದಾಜಿತ ವೆಚ್ಚದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವ ಬಾಧ್ಯತೆ ಹೊಂದಿದ್ದಾರೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

ದೇಶಕ್ಕೆ ಅತ್ಯುತ್ತಮ ಜ್ಞಾನ ಹೊಂದಿದ ಇಂಜಿನಿಯರ್ ಗಳ ಅವಶ್ಯಕತೆ ಇದೆ. ಪ್ರಧಾನಿ ನರೇಂದ್ರ ಮೋದಿ ಮೂಲಸೌಕರ್ಯ ಅಭಿವೃದ್ಧಿಗಾಗಿ 5 ಟ್ರಿಲಿಯನ್ ಡಾಲರ್ ವೆಚ್ಚದ ಯೋಜನೆಗಳ ಗುರಿ ಹೊಂದಿದ್ದಾರೆ. ಈ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಅತ್ಯಂತ ವಿಶಿಷ್ಟ ದೃಷ್ಟಿಕೋನ ಹೊಂದಿರುವ ಇಂಜಿನಿಯರ್ ಗಳ ತಂಡದ ಅಗತ್ಯವಿದೆ ಎಂದು ಶ್ರೀಧರನ್ ಅಭಿಪ್ರಾಯಪಟ್ಟಿದ್ದಾರೆ. ಇಂಜಿನಿಯರ್ ಗಳು ಸಾಮಾಜಿಕ ಬದ್ಧತೆ, ಹೊಣೆಗಾರಿಕೆಯೊಂದಿಗೆ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com