
ಜೈಪುರ: ತನ್ನ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಭಾರತೀಯ ಇತಿಹಾಸವನ್ನು 'ಹೈಜಾಕ್' ಮಾಡುತ್ತಿದ್ದು, ಭಾರತವನ್ನು 'ಹಿಂದೂ ಪಾಕಿಸ್ತಾನ'ವಾಗಿ ಮಾಡಲು ಬಿಜೆಪಿಗೆ ಅವಕಾಶ ಕೊಡುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಬಿಜೆಪಿ ತನ್ನ ರಾಜಕೀಯ ಉದ್ದೇಶಕ್ಕಾಗಿ ಭಾರತದ ಇತಿಹಾಸವನ್ನು ತಿದ್ದುವ ಹಾಗೂ ರಾಷ್ಟ್ರೀಯತೆಗೆ ಹೊಸ ವ್ಯಾಖ್ಯಾನ ನೀಡುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ, ದೇಶವನ್ನು 'ಹಿಂದೂ ಪಾಕಿಸ್ತಾನ'ವಾಗಿ ಮಾಡಲು ಬಿಜೆಪಿಗೆ ಎಂದಿಗೂ ಅವಕಾಶವನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇತಿಹಾಸವನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬಿಜೆಪಿ ಸ್ವಾತಂತ್ರ್ಯ ಹೋರಾಟವನ್ನು ಪಕ್ಕಕ್ಕಿಟ್ಟು, ಕೆಲವೊಮ್ಮೆ ವಸಾಹತುಶಾಹಿ ಆಡಳಿತವನ್ನು ಮರುಕಳಿಸುವಂತೆ ಮಾಡಲು ಸಕ್ರಿಯವಾಗಿ ಪ್ರಯತ್ನಿಸುತ್ತಿದೆ. ಬಿಜೆಪಿಯವರು ತಾವೇ ಭಾರತದಲ್ಲಿ ನಿಜವಾದ ರಾಷ್ಟ್ರೀಯವಾದಿಗಳು ಎಂಬಂತೆ ವರ್ತಿಸುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನಾಯಕರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ನರೇಂದ್ರ ಮೋದಿಯವರನ್ನು ದೇಶದ ಮೊದಲ ಗೃಹ ಸಚಿವ ಸರ್ದಾನ್ ವಲ್ಲಾಭಭಾಯಿ ಪಟೇಲ್ ಅವರಿಗೆ ಹೋಲಿಕೆ ಮಾಡುತ್ತಿದೆ. ಭಾರತದ ಇತಿಹಾಸದ ಬಗ್ಗೆ ಬಿಜೆಪಿಯವರಿಗೆ ಎಷ್ಟು ಗೊತ್ತಿದೆ ಎಂಬುದು ಇದರಿಂದಲೇ ಅರ್ಥವಾಗುತ್ತದೆ.
2002ರ ಗೋದ್ರಾ ಹತ್ಯಾಕಾಂಡ ನಡೆದಾಗ ಮೋದಿಯವರಿಗೆ ಕ್ರಮ ಕೈಗೊಳ್ಳಲು 3-4 ದಿನಗಳ ಕಾಲ ಬೇಕಾಗಿತ್ತು. ಆದರೆ, 1947ರಲ್ಲಿ ನಡೆದ ಗಲಭೆಯಲ್ಲಿ ಪಟೇಲ್ ಅವರು ಕೂಡಲೇ ಕ್ರಮ ಕೈಗೊಂಡು ದೇಶದ ರಾಜಧಾನಿಯಲ್ಲಿರುವ ಮುಸ್ಲಿಮರಿಗೆ ರಕ್ಷಣೆಯನ್ನು ನೀಡಿದ್ದರು. ಸ್ವತಃ ಪಟೇಲ್ ಅವರೇ ನಿಜಾಮುದ್ದೀನ್ ದರ್ಗಾಗೆ ಹೋಗಿ, ಮುಸ್ಲಿಂ ಸಮುದಾಯದವರಿಗಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಮೋದಿಯವರು ಮುಸ್ಲಿಮರಿಗಾಗಿ ದರ್ಗಾಗೆ ಹೋಗುತ್ತಾರೆಂಬುದನ್ನು ಕಲ್ಪಿಸಿಕೊಳ್ಳಲಾದರೂ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಯುಪಿಎ ಸರ್ಕಾರ ಪ್ರಸ್ತಾವ ಮಾಡಿದ್ದ ಜನ್ ಧನ್ ಯೋಜನೆ, ವಿಮೆ ಮಸೂದೆ, ಸರಕು ಮತ್ತು ಸೇವಾ ತೆರಿಗೆಯಂತಹ ಮಸೂದೆಯನ್ನೇ ಮೋದಿ ಸರ್ಕಾರ ಇಂದು ಜಾರಿಗೆ ತರುತ್ತಿದೆ. ಅಧಿಕಾರದ ಅವಧಿಯಲ್ಲಿ ಯುಪಿಎ ಸರ್ಕಾರ ಇದೇ ಮಸೂದೆಯನ್ನು ಮುಂದಿಟ್ಟಾಗ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಇದೇ ಬಿಜೆಪಿ ನಮ್ಮ ಸರ್ಕಾರದ ಮಸೂದೆಯನ್ನು ಜಾರಿಗೆ ತಂದಿದೆ. ಈ ಬೆಳವಣಿಗೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ದೇಶದ ಹಿತಾಸಕ್ತಿಗೆ ವಿರುದ್ಧವಾದದ್ದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
Advertisement