
ನವದೆಹಲಿ: ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ಭಾರತೀಯ ಸಂಸ್ಥೆಗಳೇ ನನಗೆ ನಕಲಿ ಪಾಸ್ ಪೋರ್ಟ್ ನ್ನು ನೀಡಿತ್ತು ಎಂದು ಭೂಗತ ಪಾತಕಿ ಛೋಟಾ ರಾಜನ್ ಗಂಭೀರ ಆರೋಪವನ್ನು ಮಾಡಿದ್ದಾನೆ.
ನಕಲಿ ಪೋಸ್ ಪೋರ್ಟ್ ಪ್ರಕರಣ ಕುರಿತಂತೆ ದೆಹಲಿಯ ತಿಹಾರ್ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ನ್ಯಾಯಾಲಯಕ್ಕೆ ಹೇಳಿಕೆ ನೀಡಿರುವ ರಾಜನ್, ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ಭಾರತೀಯ ಸಂಸ್ಥೆಗಳೇ ನನಗೆ ನಕಲಿ ಪಾಸ್ ಪೋರ್ಟ್ ನ್ನು ನೀಡಿತ್ತು ಎಂದು ಹೇಳಿದ್ದಾನೆ.
ತಮ್ಮ ಉಗ್ರವಾದದಿಂದ ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದ ಭಾರತ ವಿರೋಧಿ ಭಯೋತ್ಪಾದನೆ ವಿರುದ್ಧ ನಾನು ಹೋರಾಟ ಮಾಡುತ್ತಿದ್ದೆ. ದೇಶಕ್ಕಾಗಿ ನಾನು ಕೆಲಸ ಮಾಡುತ್ತಿದ್ದೆ. ಆದರೆ, ಭಯೋತ್ದಾದನೆ ವಿರುದ್ದ ನನ್ನೊಂದಿಗೆ ಹೋರಾಟ ಮಾಡುತ್ತಿದ್ದ ಜನರ ಹೆಸರನ್ನು ನಾನು ಬಹಿರಂಗ ಪಡಿಸಲು ಇಚ್ಛಿಸುವುದಿಲ್ಲ. ಭಯೋತ್ಪಾದನೆ ಕುರಿತಂತೆ ಭಾರತೀಯ ಸಂಸ್ಥೆಗಳಿಗೆ ನಾನು ಮಾಹಿತಿ ನೀಡುತ್ತಿದ್ದ ವಿಚಾರ ಅದು ಹೇಗೋ ದಾವೂದ್ ಇಬ್ರಾಹಿಂಗೆ ತಿಳಿದುಹೋಗಿತ್ತು. ದುಬೈನಲ್ಲಿದ್ದಾಗ ದಾವೂದ್ ಕಡೆಯವರು ನನ್ನ ಮೂಲ ಪಾಸ್ ಪೋರ್ಟ್ ನ್ನು ಕಿತ್ತುಕೊಂಡಿದ್ದರು.
ಅಲ್ಲದೆ, ನನ್ನ ಹತ್ಯೆ ಮಾಡಲು ಯತ್ನಿಸಿದ್ದರು. ಅದೃಷ್ಟವಶಾತ್ ಹೇಗೋ ದುಬೈ ನಿಂದ ಮಲೇಶಿಯಾಗೆ ಹಾರಿ ಜೀವ ಉಳಿಸಿಕೊಂಡಿದ್ದೆ. ಇದಾದ ಬಳಿಕ ನಾನು ಬ್ಯಾಂಕಾಕ್ ಗೆ ಹೋಗಿದ್ದೆ. ಅಲ್ಲಿಯೂ ನನ್ನನ್ನು ಹತ್ಯೆ ಮಾಡಲು ದಾವೂದ್ ಸಂಚು ರೂಪಿಸಿದ್ದ. ಹೀಗಾಗಿಯೇ ನನಗೆ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ನ್ನು ನೀಡಲಾಗಿತ್ತು ಎಂದು ಹೇಳಿದ್ದಾನೆ.
ಮುಂಬೈ ಸ್ಫೋಟದ ನಂತರ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಲು ನಾನು ನಿರ್ಧರಿಸಿದ್ದೆ. ಭಾರತದ ಮೇಲೆ ದಾಳಿ ಮಾಡಿದ ಉಗ್ರರ ಮೇಲೆ ಸೇಡು ತೀರಿಸಿಕೊಳ್ಳಲು ತೀರ್ಮಾನಿಸಿದ್ದೆ. ಹೀಗಾಗಿ ಭಾರತೀಯ ಗುಪ್ತಚರ ಇಲಾಖೆಗಳಿಗೆ ಸಹಾಯ ಮಾಡಲು ಆರಂಭಿಸಿದ್ದೆ. 1993ರಿಂದಲೇ ನಾನು ದೇಶಕ್ಕಾಗಿ ಕೆಲಸ ಮಾಡಲು ಆರಂಭಿಸಿದ್ದೆ. ದೇಶವನ್ನು ನಾಶ ಮಾಡಲು ಯತ್ನಿಸುತ್ತಿದ್ದ ಜನರ ವಿರುದ್ಧ ಹೋರಾಟ ಮಾಡಲು ಆರಂಭಿಸಿದ್ದೆ. ನಾನೊಬ್ಬ ನಿಜವಾದ ದೇಶ ಭಕ್ತನಾಗಿದ್ದೇನೆ.
ಒಮ್ಮೆ ಕೆಟ್ಟ ದಾರಿಯಲ್ಲಿ ಹೋರಾಟ ಆರಂಭಿಸಿದರೆ, ಮತ್ತೆ ಒಳ್ಳೆಯ ದಾರಿಗೆ ಹೋಗುವುದು ಬಹಳ ಕಷ್ಟವಾಗಿತ್ತು. ನನ್ನ ಗುರ್ತಿಕೆಯನ್ನು ಗುಪ್ತವಾಗಿರಿಸಿದ್ದೆ. ಈ ಮೂಲಕ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಿ ಭಾರತದ ಅಧಿಕಾರಿಗಳಿಗೆ ಸಹಾಯ ಮಾಡಲು ಆರಂಭಿಸಿದ್ದೆ. ಈ ಹಿನ್ನೆಲೆಯಲ್ಲಿ ನಕಲಿ ಪಾಸ್ ಪೋರ್ಟ್ ನ್ನು ಬಳಸಿಕೊಳ್ಳಲಾಗಿತ್ತೇ ವಿನಃ ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುವುದಕ್ಕಾಗಿ ಅಲ್ಲ ಎಂದು ಹೇಳಿಕೊಂಡಿದ್ದಾನೆ.
Advertisement