ಗಂಡು ಮಗು ಬೇಕೆಂಬ ಹತಾಶೆ, ಹೆಣ್ಣು ಮಗುವನ್ನು ಕೊಂದೇ ಬಿಟ್ಟ ತಾಯಿ!

ಗಂಡು ಮಗು ಬೇಕೆಂದು ಹಲುಬುವವರು, ಹೆಣ್ಣು ಮಗು ಹುಟ್ಟಿದರೆ ಬೇಡವೆಂದು ಕಿತ್ತೆಸೆಯುವವರು ಈ ಕಾಲದಲ್ಲಿಯೂ ಇರುತ್ತಾರೆ...
ನೇಹಾ ಗೋಯಲ್
ನೇಹಾ ಗೋಯಲ್
ಜೈಪುರ: ಗಂಡು ಮಗು ಬೇಕೆಂದು ಹಲುಬುವವರು, ಹೆಣ್ಣು ಮಗು ಹುಟ್ಟಿದರೆ ಬೇಡವೆಂದು ಕಿತ್ತೆಸೆಯುವವರು ಈ ಕಾಲದಲ್ಲಿಯೂ ಇರುತ್ತಾರೆ ಎಂಬುದಕ್ಕೆ ಈ ಘಟನೆ ಮತ್ತೊಂದು ಸೇರ್ಪಡೆ. ಇದು ನಡೆದದ್ದು ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿ ಭಾರೀ ಇಳಿಮುಖವಾಗಿರುವ ರಾಜಸ್ತಾನದಲ್ಲಿ.
ತನಗೆ ಗಂಡು ಮಗು ಹುಟ್ಟಬೇಕೆಂದು ಬಯಸಿ, ಹೆಣ್ಣು ಮಗು ಹಡೆದಾಗ ತಾಯಿ ಸಿಟ್ಟಿನಿಂದ ಜಿಗುಪ್ಸೆಗೊಂಡು ತನ್ನ ನಾಲ್ಕು ತಿಂಗಳ ಹೆಣ್ಣು ಮಗುವಿನ ಕತ್ತು ಸೀಳಿ ಕೊಂದ ಅಮಾನುಷ ಘಟನೆ ರಾಜಸ್ಥಾನದ ಜೈಪುರ ನಗರದಲ್ಲಿ ನಡೆದಿದೆ. ಮಗುವನ್ನು ಅಮಾನುಷವಾಗಿ ಕೊಂದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಈ ಘಟನೆ ಆಗಸ್ಟ್‌ 26ರಂದೇ ನಡೆದಿತ್ತು. ಮಗುವನ್ನು ಕೊಂದಿದ್ದು ಮಾತ್ರವಲ್ಲದೆ ಆ ಕಠಿಣ ಹೃದಯದ ತಾಯಿ ತನ್ನ ಹೆಣ್ಣು ಮಗುವಿನ ಶವವನ್ನು ಏರ್‌ ಕಂಡೀಶನ್‌ ಕ್ಯಾಬಿನ್ ಒಳಗೆ ಹುದುಗಿಸಿಟ್ಟಿದ್ದಳು.
ಈಕೆಯ ಹೆಸರು ನೇಹಾ ಗೋಯಲ್‌. ಶ್ರೀಮಂತ ಕುಟುಂಬದವಳಾಗಿದ್ದು, ಮಗುವನ್ನು ಕೊಂದು ತನ್ನ ಮಗು ನಾಪತ್ತೆಯಾಗಿದೆ ಎಂದು ನಾಟಕವಾಡಿದ್ದಳು.ಪೊಲೀಸರು ಪ್ರಕರಣದ ತನಿಖೆ ನಡೆಸಲು ಆರಂಭಿಸಿದರು. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳಿಂದ ನೇಹಾ ಗೋಯಲ್‌ ಎಸಗಿರುವ ಕೊಲೆ ಕೃತ್ಯದ ವಿವರಗಳು ಪೊಲೀಸರಿಗೆ ಲಭಿಸಿದವು. ಪೊಲೀಸರು ಆಕೆಯನ್ನು ತೀವ್ರವಾಗಿ ಪ್ರಶ್ನಿಸಿದಾಗ ತಾನು ತನ್ನ ಹೆಣ್ಣು ಮಗುವನ್ನು ಕೊಂದದ್ದು ನಿಜವೆಂದು ಒಪ್ಪಿಕೊಂಡಳು. 
ನೇಹಾಳ ಕೂಡು ಕುಟುಂಬದಲ್ಲಿ ಒಟ್ಟು 35 ಮಂದಿ ಸದಸ್ಯರಿದ್ದಾರೆ. ಅವರೆಲ್ಲರನ್ನೂ ಪೊಲೀಸರು ತೀವ್ರ ತನಿಖೆಗೆ ಗುರಿ ಪಡಿಸಿದ್ದರು. ಆದರೂ ಮಗು ನಾಪತ್ತೆಯಾದ ಬಗ್ಗೆ ಅವರಿಂದ ಯಾವುದೇ ಸುಳಿವು, ಮಾಹಿತಿ ಸಿಕ್ಕಿರಲಿಲ್ಲ ಎಂದು ಪೊಲೀಸ್‌ ಉಪ ಆಯುಕ್ತ ಅಂಶುಮಾನ್‌ ಭೂಮಿಯಾ ತಿಳಿಸಿದ್ದಾರೆ.
ನೇಹಾಗೆ ಮೊದಲ ಹೆರಿಗೆಯಲ್ಲಿ  ಹೆಣ್ಣು ಮಗುವಿದ್ದು, ಅವಳಿಗೆ ಈಗ ಎಂಟು ವರ್ಷ. ಎರಡನೇ ಮಗು ಗಂಡೇ ಹುಟ್ಟಬೇಕೆಂದು ಆಕೆ ತೀವ್ರವಾಗಿ ಬಯಸಿದ್ದಳು. ಗಂಡು ಮಗುವನ್ನು ಪಡೆಯುವುದು ಹೇಗೆಂಬ ಬಗ್ಗೆ ಆಕೆ ಅನೇಕ ವೆಬ್‌ ಸೈಟ್‌ಗಳನ್ನು ಜಾಲಾಡಿದ್ದಳು. ಮಾತ್ರವಲ್ಲದೆ ಐವಿಎಫ್, ಬಾಡಿಗೆ ತಾಯಿ ಮತ್ತು ಐಯುಐ ಮುಂತಾಗಿ ಹಲವಾರು ಸಾಧ್ಯತೆಗಳನ್ನು ಅನ್ವೇಷಿಸಿದ್ದಳು. ಕೊನೆಗೆ ಅರ್ಚಕರೊಬ್ಬರನ್ನು ಕೂಡ ಸಂಪರ್ಕಿಸಿದ್ದಳು.
ಇಷ್ಟೆಲ್ಲ ಮಾಡಿಯೂ ತನಗೆ ಮತ್ತೆ ಹೆಣ್ಣು ಮಗುವೇ ಹುಟ್ಟಿತೆಂಬ ಬಗ್ಗೆ ಆಕೆಗೆ ತೀವ್ರವಾದ ಹತಾಶೆ ಉಂಟಾಗಿತ್ತು. ಈ ಹತಾಶೆಯ ಪರಾಕಾಷ್ಠೆಯಲ್ಲಿ ಆಕೆ ತನಗೆ ಹುಟ್ಟಿದ ಎರಡನೇ ಹೆಣ್ಣುಮಗುವಿಗೆ ನಾಲ್ಕು ತಿಂಗಳಾಗುತ್ತಲೇ ಅದರ ಕತ್ತು ಸೀಳಿ ಕೊಂದಳು ಎಂದು ಡಿಸಿಪಿ ಅಂಶುಮಾನ್‌ ಭೂಮಿಯಾ ಹೇಳಿದರು. 
ಎರಡನೇ ಹೆಣ್ಣು ಮಗುವಿಗೆ ಫಿಟ್ಸ್‌ ಕಾಯಿಲೆ ಇರುವುದರಿಂದ ಅದು ಮನೋವೈಕಲ್ಯ ಹೊಂದಿರುವ  ಸಾಧ್ಯತೆಯೇ ಹೆಚ್ಚು ಎಂದು ಬಗೆದು ನೇಹಾ ಈ ಕೃತ್ಯವೆಸಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com