
ನವದೆಹಲಿ: ಭಾರತೀಯ ಬ್ಯಾಂಕ್ ಗಳಿಂದ ಸಾಲ ಪಡೆದು ಅದನ್ನು ತೀರಿಸಲಾಗದೇ ವಿದೇಶದಲ್ಲಿ ಕುಳಿತಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿದೇಶಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಉದ್ಯಮಿ ವಿಜಯ್ ಮಲ್ಯಗೆ ಸಂಬಂಧಿಸಿದ ಸುಮಾರು 8,041 ಕೋಟಿ ಸ್ವದೇಶಿ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದು, ಇದೀಗ ವಿದೇಶಿ ಆಸ್ತಿ-ಪಾಸ್ತಿಯನ್ನೂ ಕೂಡ ಮುಟ್ಟುಗೋಲು ಹಾಕಲು ಇಡಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಜಾರಿ ನಿರ್ದೇಶನಾಲಯ ಗಂಭೀರ ಚಿಂತನೆಯಲ್ಲಿ ತೊಡಗಿದ್ದು, ಈಗಾಗಲೇ ಅಧಿಕಾರಿಗಳು ವಿಜಯ್ ಮಲ್ಯಗೆ ಸಂಬಂಧಿಸಿದ ವಿದೇಶ ಆಸ್ತಿಗಳ ಕುರಿತಾದ ದತ್ತಾಂಶಗಳನ್ನು ಕಲೆಹಾಕುತ್ತಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ವಿಜಯ್ ಮಲ್ಯ ಅವರ ಮಂದ್ವಾ, ಬೆಂಗಳೂರು, ಯುನೈಟೆಡ್ ಬ್ರೆವರೀಸ್ ಲಿಮಿಟೆಡ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಿತ್ತು. ಇದಲ್ಲದೇ ಮಹಾರಾಷ್ಟ್ರದಲ್ಲಿರುವ 200 ಕೋಟಿ ಮೌಲ್ಯ ಒಂದು ಫಾರ್ಮ್ ಹೌಸ್, ಬೆಂಗಳೂರಿನಲ್ಲಿರುವ 800 ಕೋಟಿ ಮೌಲ್ಯದ ಅಪಾರ್ಟ್ ಮೆಂಟ್, ಮಾಲ್, ಹಾಗೂ ಯುಬಿಎಲ್ ಮತ್ತು ಯುಎಸ್ ಎಲ್ ನ 3000 ಕೋಟಿ ಮೌಲ್ಯದ ಆಸ್ತಿಯನ್ನು ಕೂಡ ಇಡಿ ಜಪ್ತಿ ಮಾಡಿತ್ತು. ಆ ಮೂಲಕ ವಿಜಯ್ ಮಲ್ಯಗೆ ಸೇರಿದ ಒಟ್ಟು 8,041 ಕೋಟಿ ಸ್ವದೇಶಿ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು. ಇದೀಗ ಅಧಿಕಾರಗಳ ದೃಷ್ಟಿ ಮಲ್ಯ ಅವರ ವಿದೇಶಿ ಆಸ್ತಿಗಳ ಮೇಲೆ ಬಿದ್ದಿದೆ.
ಮದ್ಯದ ದೊರೆ ಮಲ್ಯ ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ರುಪಾಯಿ ಸಾಲ ಮರುಪಾವತಿಸಬೇಕಾಗಿದೆ. ಮಾರ್ಚ್ ನಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಮಲ್ಯ ಸದ್ಯ ಲಂಡನ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಭಾರತ ಸರ್ಕಾರ ಮಲ್ಯ ಅವರ ಪಾಸ್ ಪೋರ್ಟ್ ಅನ್ನು ರದ್ದುಪಡಿಸಿದೆ. ಅಲ್ಲದೆ ಮುಂಬೈ ಕೋರ್ಟ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಿದೆ.
Advertisement