
ಪಣಜಿ: ಗೋವಾದ ಆರ್ ಎಸ್ ಎಸ್ ನ ಭಿನ್ನಮತೀಯ ನಾಯಕ ಸುಭಾಷ್ ವೆಲಿಂಗ್ಕರ್ ಬಿಜೆಪಿ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದು, ಗೋವಾದ ಬಿಜೆಪಿ ಗೋವನ್ನರನ್ನು ರಾಷ್ಟ್ರೀಯವಾದದಿಂದ ದೂರ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಘಟಕ ಮಿತಿ ಮೀರಿ ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದು, ನಮ್ಮ ಸಂಸ್ಕೃತಿ, ಭಾಷೆಗೆ ಕುತ್ತು ತರುತ್ತಿದ್ದಾರೆ ಎಂದು ವೆಲಿಂಗ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಣಜಿಯಲ್ಲಿ ಭಿನ್ನಮತೀಯ ನಾಯಕರನ್ನುದ್ದೇಶಿಸಿ ಮಾತನಾಡಿರುವುವ ವೆಲಿಂಗ್ಕರ್, ಸ್ಥಳೀಯ ಸಂಸ್ಕೃತಿ, ಭಾಷೆಯನ್ನು ನಾಶ ಮಾಡುತ್ತಿರುವ, ಗೋವಾದ ಜನತೆಯನ್ನು ರಾಷ್ಟ್ರೀಯವಾದದಿಂದ ವಿಮುಖರನ್ನಾಗಿಸುತ್ತಿರುವ ಸ್ಥಳೀಯ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಲು ಸ್ವಯಂ ಸೇವಕರು ನರಸಿಂಹ ಅವತಾರದಿಂದ ಪ್ರೇರಣೆ ಪಡೆಯಬೇಕು ಎಂದು ಕರೆ ನೀಡಿದ್ದಾರೆ.
ಶಾಲೆಗಳಲ್ಲಿ ಸ್ಥಳೀಯ ಭಾಷೆಗಿಂತ ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡುತ್ತಿರುವುದಕ್ಕೆ ಗೋವಾ ಮಾಜಿ ಮುಖ್ಯಮಂತ್ರಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ದೂರಿರುವ ವೆಲಿಂಗ್ಕರ್ ಆರ್ ಎಸ್ ಎಸ್ ನ ಭಿನ್ನಮತೀಯರಲ್ಲೂ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ಮಾಧ್ಯಮದ ವಿಚಾರದಲ್ಲಿ ಗೋವಾ ಸರ್ಕಾರದ ಕ್ರಮ, ನಡೆಯನ್ನು ವಿರೋಧಿಸಿದ್ದಕ್ಕಾಗಿ ಗೋವಾ ಆರ್ ಎಸ್ ಎಸ್ ಮುಖ್ಯಸ್ಥರಾಗಿದ್ದ ವೆಲಿಂಗ್ಕರ್ ಅವರನ್ನು ಆ ಹುದ್ದೆಯಿಂದ ಕಿತ್ತೊಗೆಯಲಾಗಿತ್ತು.
Advertisement