
ನವದೆಹಲಿ: ಕಾಶ್ಮೀರ ಪ್ರತ್ಯೇಕತೆಗೆ ಹೋರಾಟ ನಡೆಸುತ್ತಿರುವ ಹುರಿಯತ್ ನಾಯಕರನ್ನು ಪ್ರತ್ಯೇಕತಾವಾದಿಗಳು ಎಂದು ಕರೆಯುವುದು ತಪ್ಪು ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.
ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರ ತನ್ನ ಖರ್ಚಿನಲ್ಲಿ ನೀಡುತ್ತಿರುವ ವಿವಿಧ ಬಗೆಯ ಸರ್ಕಾರಿ ಸವಲತ್ತುಗಳನ್ನು ನಿಲ್ಲಿಸಬೇಕು ಎಂದು ಕೋರಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ, ಹುರಿಯತ್ ನಾಯಕರನ್ನು ಪ್ರತ್ಯೇಕತಾವಾದಿಗಳು ಎಂದು ಕರೆಯುವುದು ತಪ್ಪು ಎಂದು ಹೇಳಿದೆ. ಅಲ್ಲದೆ ಪ್ರತ್ಯೇಕತಾವಾದಿ ಎಂಬ ಪದವನ್ನು ತಾನು ತನ್ನ ಆದೇಶದಲ್ಲಿ ಬಳಸಲು ನಿರಾಕರಿಸಿತು.
ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಯುಯು ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಹುರಿಯತ್ ನಾಯಕರನ್ನು ಪ್ರತ್ಯೇಕತಾವಾದಿಗಳು ಎಂದು ಕರೆದ ವಕೀಲರ ನಡೆಯನ್ನು ಟೀಕಿಸಿತು. ಪ್ರತ್ಯೇಕತಾವಾದಿಗಳು ಎಂಬುದು ಕೇವಲ ಅರ್ಜಿದಾರರ ಗ್ರಹಿಕೆಯಾಗಿದ್ದು, ಕೇಂದ್ರ ಸರ್ಕಾರವೇನೂ ಅವರನ್ನು ಪ್ರತ್ಯೇಕತಾವಾದಿಗಳು ಎಂದು ಘೋಷಿಸಿಲ್ಲ. ವ್ಯಕ್ತಿಯೊಬ್ಬನ ನಡೆ ನುಡಿ ಇತರರಿಗೆ ಇಷ್ಟವಾಗದೆ ಹೋದಾಗ ಆತನನ್ನು ಅವರು ಪ್ರತ್ಯೇಕತಾವಾದಿ ಎಂದು ಕರೆಯುತ್ತಾರೆ. ಆದರೆ ನೀವು ಆ ಪದವನ್ನು ಕೋರ್ಟಿನಲ್ಲಿ ಬಳಸುವಂತಿಲ್ಲ' ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿತು. ಅಲ್ಲದೆ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.
ಕಳೆದ ಸೆಪ್ಟಂಬರ್ 8ರಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಕಾಶ್ಮೀರದ ಪ್ರತ್ಯೇಕತಾವಾದಿಗಳ ವಿದೇಶ ಪ್ರವಾಸ, ಭದ್ರತೆ ಮತ್ತು ಇತರೆ ಖರ್ಚು ವೆಚ್ಚಗಳಿಗೆಂದು 100 ಕೋಟಿಗೂ ಅಧಿಕ ಹಣವನ್ನು ವ್ಯಯಿಸುತ್ತಿದೆ. ಈ ಹಣವನ್ನು ಪ್ರತ್ಯೇಕತಾವಾದಿಗಳು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೆ ನೀಡುತ್ತಿರುವ ಸರ್ಕಾರ ಸೌಲಭ್ಯಗಳನ್ನು ಸ್ಥಗಿತಗೊಳಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು.
Advertisement